ಮದ್ದೂರು ನಗರದ ಶಿವಪುರ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ಕುಂದುಕೊರತೆ ಅರ್ಜಿ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ಉದ್ಘಾಟಿಸಿದರು. ಎನ್.ವಿ.ಅರವಿಂದ್, ಎಂ.ಆನಂದ್, ಡಾ.ಕುಮಾರ, ಕೆ.ಆರ್.ನಂದಿನಿ, ಡಾ.ವಿ.ಜೆ. ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇದ್ದರು.
ಭ್ರಷ್ಟಾಚಾರ, ಕರ್ತವ್ಯಲೋಪ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ.ವೀರಪ್ಪ ಎಚ್ಚರಿಸಿದರು.
ನಗರದ ಶಿವಪುರ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲೂಕಿನಲ್ಲಿ ಬಾಕಿ ಇರುವ ಕುಂದುಕೊರತೆ ಅರ್ಜಿ ವಿಚಾರಣೆ ಹಾಗೂ ವಿಲೇವಾರಿ ಸಭೆಯಲ್ಲಿ ಮಾತನಾಡಿದರು.
ಭ್ರಷ್ಟಾಚಾರ ನಿರ್ಮೂಲನೆಗೆ ಮೊದಲು ಸಮಾಜದಲ್ಲಿ ಬದಲಾವಣೆ ಆಗಬೇಕು. ಹಣ ಪಡೆದು ಮತ ಚಲಾಯಿಸುವವರು. ಹಣ ನೀಡಿ ಮತ ಖರೀದಿಸುವವರು ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವವರು ಇವರೆಲ್ಲರೂ ಭ್ರಷ್ಟಾಚಾರದ ವ್ಯವಸ್ಥೆಯ ಭಾಗವಾಗುತ್ತಾರೆ. ಜನರು ಹಣ ಪಡೆದು ಮತ ಹಾಕಿದರೆ, ನಂತರ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಬದಲಾವಣೆ ಮೊದಲು ಸಮಾಜದಿಂದಲೇ ಆರಂಭವಾಗಬೇಕು ಎಂದರು.
ಅಧಿಕಾರಿಗಳು ತಮ್ಮ ಹುದ್ದೆಯ ಉದ್ದೇಶವನ್ನು ಮರೆಯಬಾರದು. ಪ್ರತಿಯೊಂದು ಇಲಾಖೆಯ ಅಧಿಕಾರಿಯೂ ಜನಸೇವೆ ಮಾಡುವ ಉದ್ದೇಶದಿಂದ ಅಧಿಕಾರಕ್ಕೆ ಬಂದಿರುತ್ತಾರೆ. ಜನಸೇವೆಯೇ ಅಧಿಕಾರದ ಮೂಲ ಕರ್ತವ್ಯ. ಅಧಿಕಾರ ಬಂದ ನಂತರ ಜನರಿಂದ ದೂರವಾಗಿ, ಅಧಿಕಾರದ ಪ್ರಭಾವವನ್ನು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುವ ಪ್ರವೃತ್ತಿ ಸಲ್ಲದು ಎಂದರು.
ಸರ್ಕಾರಿ ಕೆಲಸ ಮಾಡಿಕೊಡಲು ಹಣ ಕೇಳುವುದು, ಕೆಲಸಕ್ಕಾಗಿ ಅನಗತ್ಯವಾಗಿ ವಿಳಂಬ ಮಾಡುವುದು, ಅಕ್ರಮವಾಗಿ ಲಾಭ ಮಾಡಿಕೊಡುವುದು ಇವೆಲ್ಲವೂ ಆಡಳಿತ ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಕುಗ್ಗಿಸುತ್ತವೆ ಎಂದರು.
ಕರ್ನಾಟಕ ಲೋಕಾಯುಕ್ತ ಸಂಸ್ಥೆ ಸ್ವತಂತ್ರ ಸಂಸ್ಥೆಯಾಗಿದ್ದು, ಯಾರ ಒತ್ತಡಕ್ಕೂ ಒಳಗಾಗದೆ ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸುತ್ತದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಕರ್ತವ್ಯಲೋಪ ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಬಗ್ಗೆ ಗೌರವವಿದೆ. ಆದರೆ ಜನರಿಗೆ ಅನ್ಯಾಯ ಮಾಡುವ, ಮೋಸ ಮಾಡುವ ಅಥವಾ ಭ್ರಷ್ಟಾಚಾರದಲ್ಲಿ ತೊಡಗುವ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಲೋಕಾಯುಕ್ತರು ಹೇಳಿದರು.
ಸರ್ಕಾರಿ ಭೂಮಿ ಮತ್ತು ಸಾರ್ವಜನಿಕ ಆಸ್ತಿಗಳ ಅಕ್ರಮ ಬಳಕೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಅಕ್ರಮ ಮಂಜೂರಾತಿ, ಸುಳ್ಳು ದಾಖಲೆಗಳು, ಕಾನೂನುಬಾಹಿರವಾಗಿ ಸರ್ಕಾರಿ ಜಮೀನುಗಳನ್ನು ಪಡೆಯುವ ಪ್ರಯತ್ನಗಳು ಕಂಡುಬಂದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಜನರು ದೂರು ನೀಡಿದಾಗ ಅದನ್ನು ನಿರ್ಲಕ್ಷಿಸದೆ ತಕ್ಷಣ ಸ್ಪಂದಿಸಬೇಕು. ಲೋಕಾಯುಕ್ತ ಸಂಸ್ಥೆಗೆ ದೂರು ಬಂದ ನಂತರ ಸಂಬಂಧಪಟ್ಟ ಅಧಿಕಾರಿಗಳು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಕೇವಲ ಲೋಕಾಯುಕ್ತ ಸಂಸ್ಥೆಯ ಜವಾಬ್ದಾರಿಯಲ್ಲ. ಸಮಾಜ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪ್ರತಿಯೊಬ್ಬ ನಾಗರಿಕರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಲೋಕಾಯುಕ್ತರು ಹೇಳಿದರು.
ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿ ನಿಮ್ಮ ಬೆನ್ನಿಗೆ ಲೋಕಾಯುಕ್ತ ಸಂಸ್ಥೆ ಇರುತ್ತದೆ. ಆದರೆ ತಪ್ಪು ಮಾಡಿದರೆ ಯಾರನ್ನೂ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದರು.
ದೇಶದ ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಿದ್ದಾರೆ. ಅವರ ತ್ಯಾಗದಿಂದಲೇ ಕೋಟ್ಯಂತರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಸೈನಿಕರ ತ್ಯಾಗವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಕುಟುಂಬದ ಸದಸ್ಯರೂ ಅಕ್ರಮ ಸಂಪತ್ತಿನ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಾಮಾಣಿಕವಾಗಿ ಗಳಿಸಿದ ಅನ್ನವೇ ನೆಮ್ಮದಿ ಕೊಡುತ್ತದೆ. ಅನ್ಯಾಯದ ಹಣದಿಂದ ಬಂದ ಸಂಪತ್ತು, ನೆಮ್ಮದಿ ನೀಡುವುದಿಲ್ಲ ಎಂದು ಹೇಳಿದರು.
ಕೆರೆ-ಕಟ್ಟೆಗಳ ಒತ್ತುವರಿ ಹಾಗೂ ಅಕ್ರಮ ನಿರ್ಮಾಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇಂದು ಕೆರೆಗಳನ್ನು ಒತ್ತುವರಿ ಮಾಡಿ ಮುಚ್ಚಿದರೆ ನಾಳೆ ನಮ್ಮ ಮಕ್ಕಳಿಗೆ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಎಚ್ಚರಿಸಿದರು.
ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ, ಉಪ ನಿಬಂಧಕ ಎನ್.ವಿ.ಅರವಿಂದ್, ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶ, ಸದಸ್ಯ ಕಾರ್ಯದರ್ಶಿ ಎಂ.ಆನಂದ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿ.ಜೆ. ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಅಧಿಕಾರಿಗಳ ಬೆವರಿಳಿಸಿದ ಉಪ ಲೋಕಾಯುಕ್ತ:
ಕಾರ್ಯಕ್ರಮದ ಬಗ್ಗೆ 1 ತಿಂಗಳ ಮುಂಚೆ ಬಾಕಿಯಿರುವ ಪ್ರಕರಣಗಳು ಹಾಗೂ ವಿಲೇವಾರಿ ಬಗ್ಗೆ ಮಾಹಿತಿ ನೀಡಿ ಸೂಕ್ತ ಮಾಹಿತಿ ಜತೆಗೆ ಬರಲು ತಿಳಿಸಿದ್ದರು. ಕೆಲವು ಅಧಿಕಾರಿಗಳು ಕಾರ್ಯಕ್ರಮಕ್ಕೆ ಸಮರ್ಪಕವಾಗಿ ಮಾಹಿತಿ ಹಾಗೂ ದಾಖಲೆ ತರದಿದ್ದಕ್ಕೆ ಉಪ ಲೋಕಾಯುಕ್ತರ ಬೆವರಿಳಿಸಿದರು.
ತಾಪಂ ಇಒ, ತಹಸೀಲ್ದಾರ್, ಬಿಇಒ ಹಾಗೂ ಅಪರ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳನ್ನು ಪ್ರಕರಣ ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡು ನಿಗಧಿತ ಅವಧಿಯೊಳಗೆ ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಂಡಬೇಕೆಂದು ತಾಕೀತು ಮಾಡಿದರು.
ಗುರುವಾರ ಸುಮಾರು 115 ಅರ್ಜಿಗಳ ವಿಚಾರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸಂಜೆಯಾದರು ವಿಚಾರಣೆ ಮುಂದುವರಿದಿತ್ತು.