ಶ್ರೀರಂಗಪಟ್ಟಣದ ಕಾವೇರಿ ನದಿಯ ಮಧ್ಯಭಾಗದಲ್ಲಿ ನಿಂತು ಭೂಮಿತಾಯಿ ಹೋರಾಟ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
- ಕಾವೇರಿ ನದಿಗಿಳಿದು ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರ ಪ್ರತಿಭಟನೆ
ಶ್ರೀರಂಗಪಟ್ಟಣ: ರಾಜ್ಯ ಸರ್ಕಾರ ತಮಿಳುನಾಡಿಗೆ ನದಿ ಮೂಲಕ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿದ್ದು, ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಸ್ನಾನಘಟ್ಟದಲ್ಲಿ ಮಂಗಳವಾರ ಮಧ್ಯಾಹ್ನ ಜಮಾವಣೆಗೊಂಡ ಸಮಿತಿಯ ರೈತ ಕಾರ್ಯಕರ್ತರು, ಏಕಾಏಕಿ ಕಾವೇರಿ ನದಿಗಿಳಿದು ಮಧ್ಯಭಾಗದಲ್ಲಿ ನಿಂತು ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಕ್ಷೇತ್ರದ ಶಾಸಕ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಸಾಲು ಸಾಲು ಘೋಷಣೆ ಕೂಗುವ ಜತೆಗೆ ಬಾಯಿ ಬಡಿದು ಆಕ್ರೋಶ ಹೊರಹಾಕಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಒಣಗುತ್ತಿರುವ ಬೆಳೆಗಳನ್ನು ಸರ್ಕಾರ ಉಳಿಸಬೇಕು. ಆದರೆ, ಒಂದು ಕಟ್ಟು ನೀರು ಕೊಡದೆ ಹುಂಬುತನ ತೋರುತ್ತಿದ್ದು, ಈ ಬಾರಿ ಯಾರೂ ಕೃಷಿ ಮಾಡದಿರಿ ಎಂದು ಆದೇಶ ನೀಡುವ ಮೂಲಕ ಹೊಣೆಗೇಡಿತನ ಪ್ರದರ್ಶಿಸಿದೆ ಎಂದು ಕಿಡಿಕಾರಿದರು.
ರೈತರ ಬೆಳೆಗಳು ನಾಶವಾಗುವ ಹಂತಕ್ಕೆ ಬಂದರೂ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿದ್ದು, ಕನ್ನಂಬಾಡಿ ಒಡಲು ತುಂಬುವ ಸಮಯದಲ್ಲಿ ನೀರಾವರಿ ಅಧಿಕಾರಿಗಳು ಕದ್ದುಮುಚ್ಚಿ ಕೆಆರ್‌ಎಸ್‌ನಿಂದ ನಿರಂತರವಾಗಿ ತಮಿಳುನಾಡಿಗೆ ಅಧಿಕ ನೀರು ಹರಿಸುತ್ತಿದ್ದಾರೆ. ಹೈಕಮಾಂಡ್ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಲು, ಪಕ್ಕದ ತಮಿಳುನಾಡಿನ ಸರ್ಕಾರ ಮತ್ತು ಅಲ್ಲಿನ ಜನಪ್ರತಿನಿಧಿಗಳ ಹಿತಕಾಯಲು ರಾಜ್ಯ ಸರ್ಕಾರ ಮುಂದಾಗಿರುವುದು ನಾಚಿಕೆಗೇಡು ಎಂದರು.
ರೈತರ ಕಣ್ಣೊರೆಸುವ ಹಾಗೂ ಯಾಮಾರಿಸುವ ನೀರಾವರಿ ಇಲಾಖೆ ಅಧಿಕಾರಿಗಳ ಯಾವ ತಂತ್ರವನ್ನೂ ಹೋರಾಟಗಾರರು ಸಹಿಸುವುದಿಲ್ಲ. ರಾಜಕಾರಣಿಗಳ ಸ್ವಾರ್ಥ ನಡೆ ವಿರುದ್ಧ ರೈತರು ತಿರುಗಿ ಬಿದ್ದಲ್ಲಿ ಶಾಸಕರು, ಸಚಿವರು ಸೇರಿದಂತೆ ಸರ್ಕಾರದ ಯಾವೊಬ್ಬ ಪ್ರತಿನಿಧಿ ಮತ್ತು ಅಧಿಕಾರಿ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿಯಬೇಕು. ಹಾಗಾಗಿ ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಿ ಕಾವೇರಿ ಕಣಿವೆಯ ನಾಲೆಗಳಿಗೆ ನೀರು ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಮೇಳಾಪುರ ಜಯರಾಮೇಗೌಡ, ಜಗದೀಶ್, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಪದಾಧಿಕಾರಿಗಳಾದ ಬಲ್ಲೇನಹಳ್ಳಿ ಮಂಜುನಾಥ್, ಅಚ್ಚಪ್ಪನಕೊಪ್ಪಲು ರಮೇಶ, ಕೃಷ್ಣ ಕಡತನಾಳು ಬಾಬು, ಪೈ.ನಾಗಣ್ಣ, ಹೆಬ್ಬಾಡಿಹುಂಡಿ ರಾಮಚಂದ್ರು, ಪಾಲಹಳ್ಳಿ ರಾಮಚಂದ್ರು ಇತರರಿದ್ದರು.