ಮಳವಳ್ಳಿ ತಾಲೂಕಿನ ಕ್ಯಾತನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಟಿ.ಎಂ.ಮಹೇಶ್ ಮಾತನಾಡಿದರು. ಉಪಾಧ್ಯಕ್ಷ ಎಸ್.ನಾರಾಯಣ, ನಿರ್ದೇಶಕರಾದ ಶಿವಲಿಂಗಯ್ಯ, ಆರ್.ಎಲ್.ರವಿಶಂಕರ್ ಇತರರು ಇದ್ದರು.
ಮಳವಳ್ಳಿ: ಷೇರುದಾರ ರೈತರ ಅನುಕೂಲಕ್ಕಾಗಿ ಸಂಗ್ರಹಿಸಿರುವ ಮರಣ ನಿಧಿ ಸೇರಿದಂತೆ ಸಂಘದ ವತಿಯಿಂದ ಸಹಕಾರ ಕಾಯ್ದೆ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಕ್ಯಾತನಹಳ್ಳಿ ಸೊಸೈಟಿ ಅಧ್ಯಕ್ಷ ಟಿ.ಎಂ.ಮಹೇಶ್ ತಿಳಿಸಿದರು.
ತಾಲೂಕಿನ ಕ್ಯಾತನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸರ್ವ ಸದಸ್ಯರ ಸಹಕಾರದಿಂದ ಸಂಘವು 2025-26ನೇ ಸಾಲಿನಲ್ಲಿ ಉತ್ತಮ ವಹಿವಾಟು ನಡೆಸುವ ಮೂಲಕ 11.38 ಲಕ್ಷ ರೂ. ನಿವ್ವಳ ಆದಾಯ ಗಳಿಸಿದೆ. ಸಭೆಯಲ್ಲಿ ವ್ಯಕ್ತವಾದ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿ, ಪಾರದರ್ಶಕ ಆಡಳಿತ ನೀಡಲಾಗುವುದು. ಸದಸ್ಯರಿಂದಲೇ ಸಂಘದ ಅಭಿವೃದ್ಧಿ ಸಾಧ್ಯವಾಗಿದೆ. ನಿಮ್ಮ ಸಹಕಾರ, ಸಲಹೆಗಳನ್ನು ಗೌರವಿಸಿ ಆಡಳಿತಾತ್ಮಕವಾಗಿ ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಸಿಇಒ ಎನ್.ಡಿ.ಪುಟ್ಟೇಗೌಡ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದರು. ಸಂಘದ ಉಪಾಧ್ಯಕ್ಷ ಎಸ್. ನಾರಾಯಣ, ನಿರ್ದೇಶಕರಾದ ಶಿವಲಿಂಗಯ್ಯ, ಆರ್.ಎಲ್.ರವಿಶಂಕರ್, ಕೆ.ಎಂ.ಜಗದೀಶ್, ನಾಗೇಶ, ಉಮೇಶ, ಚಂದ್ರಶೇಖರ, ಮರಿಸ್ವಾಮಿ, ಲಕ್ಷ್ಮೀ, ಸುಜಾತಾ ಇದ್ದರು.