ಮದ್ದೂರು ನಗರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಶಿವಪುರದ ಆಶ್ರಯ ಬಡಾವಣೆ ನಿವಾಸಿಗಳಿಗೆ ಶಾಸಕ ಕೆ.ಎಂ.ಉದಯ್ ಹಕ್ಕುಪತ್ರ ವಿತರಿಸಿದರು. ರಾಧಿಕಾ, ಶ್ರೀಧರ್, ಅರ್ಚನಾ, ಪುಟ್ಟಸ್ವಾಮಿ, ಲೋಕೇಶ್ ಇದ್ದರು. 
ಮಂಡ್ಯ

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ

ಎಂ.ರವಿ

ಮದ್ದೂರು:

ಶಿವಪುರದ ಆಶ್ರಯ ಬಡಾವಣೆ ಮನೆ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಜತೆಗೆ ಕಳೆದ ಹಲವಾರು ವರ್ಷಗಳಿಂದಲೇ ನನೆಗುದಿಗೆ ಬಿದ್ದಿರುವ ಹಕ್ಕುಪತ್ರ ವಿತರಣೆಗೆ ಶೀಘ್ರದಲ್ಲೇ ಕ್ರಮವಹಿಸುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದರು.

ನಗರದ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ನಗರದ ಶಿವಪುರ ಆಶ್ರಯ ಬಡಾವಣೆ ನಿವಾಸಿಗಳ ಆಯ್ದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಈ ಹಿಂದೆ ಮದ್ದೂರು ಕ್ಷೇತ್ರ ಪ್ರತಿನಿಧಿಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರವರು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನಿವೇಶನ ಮತ್ತು ಸೂರು ಕಲ್ಪಿಸಬೇಕೆಂಬ ಉದ್ದೇಶದಿಂದ ಶಿವಪುರ ಆಶ್ರಯ ಬಡಾವಣೆ ನಿರ್ಮಿಸಿ ಅರ್ಜಿದಾರರಿಗೆ ನಿವೇಶನ ಮಂಜೂರು ಮಾಡಿದ್ದರು.
ನಾನು ಶಾಸಕನಾದ ಮೂರು ವರ್ಷಗಳ ಅವಧಿಯಲ್ಲಿ ಆಶ್ರಯ ಬಡಾವಣೆ ನಿವಾಸಿಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಜತೆಗೆ ಸ್ಥಳಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮವಹಿಸಿದ್ದು ಅನಧಿಕೃತ ಮತ್ತು ಹೆಚ್ಚುವರಿಯಾಗಿ ನಿವೇಶನ ಪಡೆದಿರುವ ಫಲಾನುಭವಿಗಳಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಿವೇಶನ ಪಡೆದಿರುವ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಸೂರು ಕಲ್ಪಿಸಲು ಮುಂದಾಗದಿದ್ದಲ್ಲಿ ನಗರಸಭೆ ಅಧಿಕಾರಿಗಳು ವಾಪಸ್ ಪಡೆಯಲಿದ್ದಾರೆ. ಇದನ್ನರಿತು ನಿವಾಸಿಗಳು ತಮಗೆ ನೀಡಿರುವ ಗಡುವಿನೊಳಗೆ ಮನೆ ನಿರ್ಮಿಸುವಂತೆ ಸೂಚಿಸಿದರು.
ಸಾಂಕೇತಿಕವಾಗಿ 14 ಅರ್ಹ ಪಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದು ಉಳಿದಿರುವ 154 ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಹಕ್ಕುಪತ್ರ ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ನಗರಸಭೆ ಪೌರಾಯುಕ್ತೆ ರಾಧಿಕಾ, ವ್ಯವಸ್ಥಾಪಕ ಶ್ರೀಧರ್, ಪರಿಸರ ಇಂಜಿನಿಯರ್ ಅರ್ಚನಾ, ಅಧಿಕಾರಿಗಳಾದ ಪುಟ್ಟಸ್ವಾಮಿ, ಲೋಕೇಶ್ ಇತರರಿದ್ದರು.