ಯಡಗನಹಳ್ಳಿ, ಸಬ್ಬನಹಳ್ಳಿ, ಕೆ.ಶೆಟ್ಟಹಳ್ಳಿ, ಯಲಾದಹಳ್ಳಿ ಮೂಲಕ ಬಿದರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ 1.30 ಕೋಟಿ ರೂ.ವೆಚ್ಚದ ಕಾಮಗಾರಿಗೆ ಶಾಸಕ ಕದಲೂರು ಉದಯ್ ಭೂಮಿ ಪೂಜೆ ನೆರವೇರಿಸಿದರು. 
ಮಂಡ್ಯ

ಗುಂಡಿ ಬಿದ್ದಿರುವ ರಸ್ತೆಗಳ ಅಭಿವೃದ್ಧಿಗೆ ಕ್ರಮ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕದಲೂರು ಉದಯ್ ಭರವಸೆ
ಕೆ.ಎಂ.ದೊಡ್ಡಿ: ಮದ್ದೂರು ಕ್ಷೇತ್ರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕದಲೂರು ಉದಯ್ ಭರವಸೆ ನೀಡಿದರು.
ಸಮೀಪದ ಯಡಗನಹಳ್ಳಿ, ಸಬ್ಬನಹಳ್ಳಿ, ಕೆ.ಶೆಟ್ಟಹಳ್ಳಿ, ಯಲಾದಹಳ್ಳಿ ಮೂಲಕ ಬಿದರಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ 1.30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆಗಳ ಅಭಿವೃದ್ಧಿಯಿಂದ ಕ್ಷೇತ್ರ ಮತ್ತಷ್ಟು ಪ್ರಗತಿ ಸಾಧಿಸಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕ್ಷೇತ್ರಾದ್ಯಂತ ಹದಗೆಟ್ಟಿರುವ ರಸ್ತೆಗಳ ಪಟ್ಟಿ ಮಾಡಿದ್ದು ಮೊದಲ ಹಂತದಲ್ಲಿ ಸ್ವಲ್ಪ ಮಟ್ಟಿಗೆ ರಸ್ತೆ ಅಭಿವೃದ್ಧಿ ಮಾಡಿ ಹಂತ ಹಂತವಾಗಿ ಕ್ಷೇತ್ರದ ಎಲ್ಲ ರಸ್ತೆಗಳಿಗೂ ಕಾಯಕಲ್ಪ ನೀಡಲಾಗುವುದು ಎಂದರು.
ಕ್ಷೇತ್ರದ ದೊಡ್ಡ ಯೋಜನೆಯಾದ ಸೂಳೆಕೆರೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಪ್ರಗತಿಯಲ್ಲಿದ್ದು, ಈಗಾಗಲೇ ಒತ್ತುವರಿ ತೆರವುಗೊಳಿಸಿ ಕೆರೆ ಹೂಳು ತೆಗೆಯಲಾಗುವುದು. ಇದರಿಂದ ಆಳ ಮತ್ತು ಅಗಲ ಹೆಚ್ಚಾಗುತ್ತಿದ್ದು, ಇನ್ನು ಎರಡು-ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉತ್ತಮ ಪ್ರವಾಸಿ ತಾಣ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಬಿ.ಬಸವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಗ್ರಾ.ಪಂ.ಮಾಜಿ ಅಧ್ಯಕ್ಷ ಕೆಂಚೇಗೌಡ, ಮುಖಂಡರಾದ ರೈಸ್ ಮಿಲ್ ಪುಟ್ಟೇಗೌಡ, ಚನ್ನಬಸವೇಗೌಡ, ವೈ.ಸಿ.ರಾಜು, ಶಂಕರ್, ಅರುಣ್, ರಮೇಶ್, ರವಿ, ಚಂದ್ರು, ಮಹೇಶ, ದೊರೆಸ್ವಾಮಿ ಸೇರಿದಂತೆ ಮತ್ತಿತರಿದ್ದರು.