ಮದ್ದೂರು ತಾಲೂಕಿನ ಕದಲೂರು ಗ್ರಾಮದಲ್ಲಿ ಆಯೋಜಿಸಿದ್ದ ಮತಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹಿ ಹಾಕುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಕೆ.ಎಂ.ಉದಯ್, ರಾಜೀವ್, ಹರೀಶ್‌ಬಾಬು, ಚಲುವರಾಜು, ಪಿ.ಸಂದರ್ಶ ಇದ್ದರು.
ಮದ್ದೂರು: ತಾಲೂಕಿನಲ್ಲಿ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆ, ಕಾರ್ಮಿಕರ ಭವನ ನಿರ್ಮಿಸಲು ಹಾಗೂ ಕಾರ್ಮಿಕರಿಗೆ ಟೂಲ್ ಕಿಟ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು.
ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ ಅವರ ನಿವಾಸದಲ್ಲಿ ಮಂಗಳವಾರ ಶಾಸಕರು ಮತ್ತು ಸ್ಥಳೀಯ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆ ವತಿಯಿಂದ ಶಾಸಕರು ಮನವಿ ಮಾಡಿರುವ ಮೂರು ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಕಟ್ಟಡ ಕಾರ್ಮಿಕರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೇ ವರ್ಷಗಳ ಅವಧಿಯಲ್ಲಿ ಕಾರ್ಮಿಕರಿಗೆ 55 ಕೋಟಿ ರೂ.ಗಳನ್ನು ವಿತರಿಸಿದ್ದು, ಜತೆಗೆ 13 ಲಕ್ಷ ಮಕ್ಕಳಿಗೆ ಅಗತ್ಯ ಸೌಲಭ್ಯ ಒಂದೇ ಅವಧಿಯಲ್ಲಿ ಪೂರೈಕೆ ಮಾಡಿರುವುದಾಗಿ ವಿವರಿಸಿದರು. ಸೌಲಭ್ಯ ವಂಚಿತ ಕಾರ್ಮಿಕರ ಬಗ್ಗೆ ಮಾಹಿತಿಯಿದ್ದಲ್ಲಿ ಅದನ್ನು ಸರಿಪಡಿಸಿ ಅಗತ್ಯ ಯೋಜನೆ ರೂಪಿಸಲು ಕ್ರಮ ವಹಿಸಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕರ ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಿ, ಹತ್ತು ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಹಿಂದುಳಿದಿರುವ ಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಯಾವುದೇ ಸರ್ಕಾರಗಳು ಒಂದೇ ಅವಧಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲವಾಗಿದೆ. ಹಂತ ಹಂತವಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಎಂ.ಉದಯ ಮಾತನಾಡಿ, ಕೇಂದ್ರ ಸರ್ಕಾರ ಇವಿಎಂ ಎನ್ನು ದುರುಪಯೋಗ ಪಡಿಸಿಕೊಂಡು ಆಡಳಿತ ನಡೆಸುತ್ತಿದ್ದು ಈಗಾಗಲೇ ರಾಹುಲ್‌ಗಾಂಧಿ ಅವರು ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿರುವ ಮತ ಚೋರಿ ಪ್ರಕರಣಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ತಾವು ಮದ್ದೂರು ಕ್ಷೇತ್ರದಲ್ಲಿ ಸಹಿ ಸಂಗ್ರಹ ಅಭಿಯಾನ ಕೈಗೊಂಡಿರುವುದಾಗಿ ಹೇಳಿದರು.
ಈಗಾಗಲೇ ಹಲವು ರಾಜ್ಯಗಳಲ್ಲಿ ಮತಚೋರಿ ನಡೆದಿರುವ ಬಗ್ಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ದಾಖಲೆಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲೂ ಪಕ್ಷ ನಿರಂತರ ಹೋರಾಟ ರೂಪಿಸಲಿದೆ ಎಂದು ತಿಳಿಸಿದರು.
ದೆಹಲಿಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯವೇ ಕಾರಣವಾಗಿದ್ದು, ಈ ಸಂಬಂಧ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚಲುವರಾಜು, ಪಿ.ಸಂದರ್ಶ, ಕದಲೂರು ಗ್ರಾ.ಪಂ. ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ರಾಮಕೃಷ್ಣ, ಶಿವಲಿಂಗಯ ಇದ್ದರು.