ಚನ್ನರಾಯಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ಆನಂದ ಮೂರ್ತಿ ಕೋಟೆ ಮೋಹನ್, ಒಳಗೇರಳ್ಳಿ ಮಂಜುನಾಥ್, ಪುರಿ ಮಂಜಪ್ಪ ಇತರರು ಇದ್ದರು. 
ಮಂಡ್ಯ

ಕ್ರೀಡಾಂಗಣ ಸುತ್ತ ಗ್ಯಾಲರಿ ನಿರ್ಮಾಣಕ್ಕೆ ಕ್ರಮ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ
  • ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
ಚನ್ನರಾಯಪಟ್ಟಣ: ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನದ ಲಭ್ಯತೆ ಆಧಾರದ ಮೇಲೆ ಕ್ರೀಡಾಂಗಣದ ಸುತ್ತ ಕ್ರೀಡಾಭಿಮಾನಿಗಳ ಅನುಕೂಲಕ್ಕಾಗಿ ಗ್ಯಾಲರಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸ್ಥಳೀಯ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕ್ರೀಡಾಂಗಣದಲ್ಲಿ ಪೆವಿಲಿಯನ್, ಕೊಠಡಿಗಳು ಹಾಗೂ ಪ್ರೇಕ್ಷಕರು ಕುಳಿತುಕೊಳ್ಳಲು ಗ್ಯಾಲರಿ, ಪ್ರತ್ಯೇಕವಾದ ಶೌಚಗೃಹ ಸೇರಿದಂತೆ ಕ್ರೀಡಾಂಗಣಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೊಳಿಸಲಾಗಿದೆ. ಕ್ರೀಡಾಂಗಣವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 1 ಕೋಟಿ ರೂ.ಅನುದಾನ ಬಿಡುಗಡೆ ಮಾಡಿಸಲಾಗಿದೆ. 1 ಕೋಟಿ ರೂ. ಅನುದಾನದಲ್ಲಿ ವಾಲಿಬಾಲ್, ಕಬಡ್ಡಿ, ಕೊಕ್ಕೊ, ಎತ್ತರ ಜಿಗಿತ, ಉದ್ದ ಜಿಗಿತ ಅಂಕಣ, ಕುಡಿಯುವ ನೀರಿನ ವ್ಯವಸ್ಥೆಗೆ ಸಂಪ್ ನಿರ್ಮಾಣ ಹಾಗೂ ಕ್ರೀಡಾಂಗಣದಲ್ಲಿ ನೀರು ನಿಲ್ಲದಂತೆ ಒಳಚರಂಡಿ ವ್ಯವಸ್ಥೆ ಸೇರಿದಂತೆ ಕ್ರೀಡಾಂಗಣ ಸುತ್ತಾ ಚೈನ್ ಲಿಂಕ್ ಪೆನ್ಸಿಂಗ್ ವ್ಯವಸ್ಥೆ ಮಾಡಿ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡದ ಹಾಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಆನಂದ ಮೂರ್ತಿ, ಪುರಸಭಾ ಮುಖ್ಯ ಅಧಿಕಾರಿ ಆರ್.ಯತೀಶ್ ಕುಮಾರ್, ಮಾಜಿ ಅಧ್ಯಕ್ಷ ಕೋಟೆ ಮೋಹನ್, ಸದಸ್ಯ ರಾಮು, ಮುಖಂಡರಾದ ಪುರಿ ಮಂಜಪ್ಪ, ಒಳಗೆರಳ್ಳಿ ಮಂಜುನಾಥ್ ಸೇರಿದಂತೆ ಕ್ರೀಡಾಂಗಣದ ನಿರ್ವಾಹಕ ಸೂರ್ಯ ಕುಮಾರ್ ಸೇರಿದಂತೆ ಕ್ರೀಡಾಪಟುಗಳು ಭಾಗವಹಿಸಿದ್ದರು.