ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಕಾವೇರಿ ನದಿಗಿಳಿದು ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ: ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಕೆ.ಆರ್.ಎಸ್ ಜಲಾಶಯದಿಂದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದ ಸ್ನಾನಘಟ್ಟದಲ್ಲಿ ಕಾವೇರಿ ನದಿಗಿಳಿದು ಗುರುವಾರ ಪ್ರತಿಭಟನೆ ನಡೆಸಿದರು.
ರೈತನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕನ್ನಂನಾಡಿ ಜಲಾಶಯದಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹ, ರಾಜ್ಯಕ್ಕೆ ಬೇಕಿರುವ ಅಗತ್ಯತೆ, ನೀರಿನ ಕೊರತೆಯಿಂದ ಎದುರಾಗಿರುವ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಅಗತ್ಯ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಸಲ್ಲಿಸುವಲ್ಲಿ ಎಡವಿದೆ. ತಮಿಳುನಾಡು ಈ ವಿಚಾರದಲ್ಲಿ ಪ್ರತ್ಯೇಕ ತಜ್ಞರ ತಂಡವನ್ನೇ ವಿಶೇಷವಾಗಿ ನಿಯೋಜಿಸಿದೆ. ಅಗತ್ಯತೆ ಬಿದ್ದಾಗ ಕಾವೇರಿ ನೀರು ನಿರ್ವಹಣಾ ಸಮಿತಿ ಎದುರು ದಾಖಲೆಗಳನ್ನು ಸಲ್ಲಿಸಿ ಕಾರ್ಯ ಸಾಧಿಸುವ ಜತೆಗೆ ಮೇಲಿಂದ ಒತ್ತಡದ ತಂತ್ರ ಸಾಧಿಸಿ ಲಾಬಿ ಮಾಡುತ್ತಿದೆ ಎಂದರು.
ಸರ್ಕಾರ ಸರಿಯಾದ ವಾದ ಮಂಡಿಸಿ ಸಮಿತಿಗೆ ಪ್ರಸ್ತುತ ಕಾವೇರಿ ಕಣಿವೆಯ ಸಮಸ್ಯೆ ಮನದಟ್ಟು ಮಾಡಿಸಬೇಕು. ನೀರಿಲ್ಲದೆ ರಾಜ್ಯದ ರೈತರು ಮತ್ತು ಜನರು ಅನುಭವಿಸುತ್ತಿರುವ ಸಮಸ್ಯೆ ನಡುವೆ ಓಲೈಸಿಕೊಳ್ಳುವ ಅಥವಾ ಆದೇಶ ಪಾಲಿಸುವ ಕಾರಣ ಹೇಳಿ ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿದರು.
ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ಖಜಾಂಚಿ ಮಹದೇವು, ಮುಖಂಡರಾದ ಹೆಬ್ಬಾಡಿಹುಂಡಿ ಸಿದ್ದೇಗೌಡ, ಅಚ್ಚಪ್ಪನಕೊಪ್ಪಲು, ರವಿಲಕ್ಷ್ಮಣ, ಡಿ.ಮಂಜುನಾಥ್, ಕಪರನಕೊಪ್ಪಲು ಸುರೇಶ್, ಮಹೇಶ್, ದೊಡ್ಡೇಗೌಡನಕೊಪ್ಪಲು ರವಿ, ಕೆಂಪೇಗೌಡ, ರಾಮಕೃಷ್ಣ ಭಾಗವಹಿಸಿದ್ದರು.