ಮಳವಳ್ಳಿ ಪಟ್ಟಣದಲ್ಲಿ ಗಂಗಾಜಯಂತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದ ದಾವಣಗೆರೆ ಫೈಲ್ವಾನ್ ಸಂಜೀವ್ ಕೊರವಣಿ ಅವರಿಗೆ ಬೆಳ್ಳಿಗದೆ ನೀಡಿ ಗೌರವಿಸಲಾಯಿತು. ರವೀಂದ್ರಕುಮಾರ್, ಪೈಲ್ವಾನ್ ಮಾದೇಶ್, ದೊಡ್ಡಯ್ಯ, ಆಟೋ ಮಂಜು ಇದ್ದರು. 
ಮಂಡ್ಯ

ಫೈಲ್ವಾನ್ ಸಂಜೀವ್ ಕೊರವಣಿಗೆ ಬೆಳ್ಳಿಗದೆ

ಮಳವಳ್ಳಿ: ಪಟ್ಟಣದ ಗಂಗಾಮತ ಬಡಾವಣೆಯಲ್ಲಿ ಜೂ.16ರಿಂದ 25ರವರೆಗೆ ಆಚರಿಸಲಾಗುತ್ತಿರುವ ಗಂಗ ಜಯಂತಿ ಉತ್ಸವದ ಅಂಗವಾಗಿ ಸೋಮವಾರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಿತು.
ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗಂಗಾ ಪರಮೇಶ್ವರಿ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಗೆ ಬಾಗಲಕೋಟೆ ರಾಮರೂಡ ಮಠದ ಪೀಠಾಧ್ಯಕ್ಷ ಶ್ರೀ ಪರಮಾರೂಡ ಸ್ವಾಮೀಜಿ ಚಾಲನೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ಫೈಲ್ವಾನರು ಆಗಮಿಸಿದ್ದರು. ಇವರ ಪೈಕಿ ಮೂವರು ಮಹಿಳಾ ಕುಸ್ತಿಪಟುಗಳು ಪಾಲ್ಗೊಂಡು ಗಮನ ಸೆಳೆದರು.
ಹಲವು ಸುತ್ತುಗಳಲ್ಲಿ ಫೈಲ್ವಾನರು ಸೆಣಸಾಡಿ ನೋಡುಗರ ಮೈ ನವಿರೇಳಿಸುವಂತೆ ಮಾಡಿದರು. ಅಂತಿಮ ಸುತ್ತಿನಲ್ಲಿ ಬೆಳಗಾವಿ ಶಂಕರ್ ಪಾಟೀಲ್ ವಿರುದ್ಧ ದಾವಣಗೆರೆ ಫೈಲ್ವಾನ್ ಸಂಜೀವ್ ಕೊರವಣಿ ಹೋರಾಟ ನಡೆಸಿ ವಿಜೇತರಾದರು. ವಿಜೇತ ಫೈಲ್ವಾನ್ ಸಂಜೀವ್ ಕೊರವಣಿ ಅವರಿಗೆ ಆಯೋಜಕರು ನಿಜಶರಣ ಅಂಬಿಗರ ಚೌಡಯ್ಯ ಪ್ರಶಸ್ತಿ, ಬೆಳ್ಳಿಗದೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ರವೀಂದ್ರಕುಮಾರ್, ಕುಸ್ತಿ ಪಂದ್ಯಾವಳಿ ವ್ಯವಸ್ಥಾಪಕ ಪೈಲ್ವಾನ್ ಮಾದೇಶ್, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಮುಖಂಡರಾದ ಆಟೋ ಮಂಜು, ಜಗದೀಶ್, ಶಿವಸ್ವಾಮಿ, ಕಂಬರಾಜು, ಶಿವಮಾಧು, ಪುಟ್ಟಮಾದಯ್ಯ ಇದ್ದರು.