ಮಂಡ್ಯದಲ್ಲಿ ಆಯೋಜಿಸಿದ್ದ ರಾಜ್ಯ ಸಮ್ಮೇಳನದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರಾಧ್ಯಕ್ಷ ಡಿ.ರವೀಂದ್ರನ್ ಮಾತನಾಡಿದರು. 
ಮಂಡ್ಯ

ಬಜೆಟ್‌ನಲ್ಲಿ ಕೃಷಿಗೆ ಆದ್ಯತೆ ಕಡಿಮೆ: ಕಬ್ಬು ಬೆಳೆಗಾರರ ಸಂಘದ ರಾಷ್ಟ್ರಾಧ್ಯಕ್ಷ ಡಿ.ರವೀಂದ್ರನ್ ಆತಂಕ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಮಟ್ಟದ ಕಬ್ಬು ಬೆಳೆಗಾರರ ಸಮ್ಮೇಳನ
  • ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಆಯೋಜನೆ
ಮಂಡ್ಯ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಕಮ್ಯೂನಿಸ್ಟ್ ಪಕ್ಷ ಸೇರಿದಂತೆ ಬೇರೆ ಯಾವ ಪಕ್ಷಗಳಿರಲಿ ಅವರಿಗೆ ಬೆಂಬಲ ಕೊಡುವ ರೈತರು ಸಿಗುತ್ತಾರೆ. ಆದರೆ ನಾವೆಲ್ಲರೂ ರೈತರು ಎನ್ನುವುದನ್ನು ಮರೆಯಬಾರದು. ಈ ಹಿಂದೆ ಇದ್ದಂತಹ ಕಾಂಗ್ರೆಸ್ ಮತ್ತು ಈಗ ಇರುವ ಬಿಜೆಪಿ ಸರ್ಕಾರದ ನೀತಿಗಳು ರೈತರ ಮೇಲೆ ತೀವ್ರ ಪರಿಣಾಮ ಬೀರಿವೆ. ಪರಿಣಾಮ ರೈತರ ಆತ್ಮಹತ್ಯೆ ಮತ್ತು ಸಂಕಷ್ಟ ಹೆಚ್ಚಳವಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಷ್ಟ್ರಾಧ್ಯಕ್ಷ ಡಿ.ರವೀಂದ್ರನ್ ಆತಂಕ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಆಯೋಜಿಸಿದ್ದ ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನೀಡುತ್ತಿದ್ದ ಬಂಡವಾಳವನ್ನು ವರ್ಷದಿಂದ ವರ್ಷಕ್ಕೆ ಹಣವನ್ನು ಕಡಿಮೆ ಮಾಡಿಕೊಂಡು ಬರಲಾಗುತ್ತಿದೆ. ಜತೆಗೆ ಸಬ್ಸಿಡಿ ನೀಡುತ್ತಿಲ್ಲ, ಅನುದಾನ ಕೊಡುತ್ತಿಲ್ಲ. ದಿಢೀರ್ ಬೆಲೆ ಹೆಚ್ಚಳದಿಂದ ರೈತರು ಕಂಗಾಲಾಗಿದ್ದಾರೆ ಎಂದರು.
ಭತ್ತ ಹಾಗೂ ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ಕಿಲುಬು ಕಾಸು ಮಾತ್ರ. ಆದರೆ ಡೀಸೆಲ್, ಉತ್ಪಾದನಾ ವೆಚ್ಚ ಹಾಗೂ ರಸಗೊಬ್ಬರ ಬೆಲೆ ಹೆಚ್ಚಳದಷ್ಟೂ ಬೆಂಬಲ ಬೆಲೆಯನ್ನು ರೈತರಿಗೆ ನೀಡದಿರುವುದು ವಿಪರ್ಯಾಸ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿಯೇ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ನಡೆದುಕೊಂಡಿವೆ ಎಂದು ವಿಷಾದಿಸಿದರು.
2026-27ನೇ ಸಾಲಿನ ಭತ್ತಕ್ಕೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು ಒಂದು ಕ್ವಿಂಟಾಲ್‌ಗೆ 2,441 ರೂ ಘೋಷಣೆ ಮಾಡಿದೆ. ಹಿಂದಿನ ಬೆಂಬಲ ಬೆಲೆಗೂ ಈಗಿನ ಬೆಂಬಲ ಬೆಲೆಗೆ ಎಷ್ಟು ಹೆಚ್ಚಳವಾಗಿದೆ ಎಂದರೆ 72 ರೂ ಮಾತ್ರ. ಇಷ್ಟು ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ, ಕೀಟನಾಶಕಗಳ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಇಷ್ಟು ಉತ್ಪಾದನಾ ವೆಚ್ಚದ ಬೆಲೆ ಹೆಚ್ಚಾಗಿರುವಾಗ ರೈತರು ಸಂಕಷ್ಟ ನಿವಾರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಇನ್ನೂ ಕಬ್ಬಿಗೆ ನೋಡುವುದಾದರೆ ಇಳುವರಿ ಶೇ.10.25ರ ಆಧಾರದ ಮೇಲೆ ಒಂದು ಟನ್‌ಗೆ 3,550 ರೂ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ಅಂದತೆ 90 ರೂ ಹೆಚ್ಚಳ ಮಾಡಲಾಗಿದೆ. ಭತ್ತ, ಕಬ್ಬಿಗೆ ಸರ್ಕಾರ ಕೊಡುತ್ತಿರುವ ಬೆಲೆಯು ಇಳುವರಿ ಮತ್ತು ವೆಚ್ಚಕ್ಕೆ ಸರಿದೂಗುತ್ತಿಲ್ಲ. ಬಿಜೆಪಿ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ರೈತರಿಗೆ ಯಾವ ರೀತಿಯ ಸಹಾಯವನ್ನು ಮಾಡುವುದಿಲ್ಲ. ಇದು ಮತ್ತಷ್ಟು ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ದೂರಿದರು.
ಕೇಂದ್ರ ಸರ್ಕಾರವು ಬಹುರಾಷ್ಟ್ರೀಯ ಕಂಪನಿ ಪರವಾಗಿದ್ದು, ಅದಾನಿ ಅಂತಹ ಕಂಪನಿಗಳಿಗೆ ಎಫ್‌ಸಿಐ(ಆಹಾರ ಸಂರಕ್ಷಣಾ ಘಟಕ) 168 ಗೋಡೌನ್‌ಗಳನ್ನ ವಿತರಣೆ ಮಾಡಲು ವರ್ಗಾವಣೆ ಮಾಡಿರುವುದನ್ನು ನೋಡುತ್ತಿದ್ದೇವೆ. ಇದಲ್ಲದೇ ಮುಕ್ತ ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕಿದೆ. ಇಂದು ಹೈನುಗಾರಿಕೆ ನಡೆಸುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ಇದೆ ಎಂದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಜಿ.ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್, ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ್, ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್.ಆರ್.ನವೀನ್‌ಕುಮಾರ್, ಜಿಲ್ಲಾ ಸಹ ಸಂಚಾಲಕ ಎನ್.ಲಿಂಗರಾಜಮೂರ್ತಿ, ಶರಣಬಸವ, ಮಂಜುನಾಥ್, ಎಂ.ಬಿ.ನಾಗಣ್ಣಗೌಡ, ವೇಣುಗೋಪಾಲ್, ಗುರುಸ್ವಾಮಿ ಇತರರಿದ್ದರು.