ಮಂಡ್ಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕವಿ ಕಾವ್ಯಮೇಳದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಯಿತು.  
ಮಂಡ್ಯ

ಸ್ವಾಸ್ಥ್ಯ ಕದಲಿಸುತ್ತಿರುವ ಸಿನಿ ಸಾಹಿತ್ಯ: ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಕಳವಳ

ಪ್ರಮುಖ ಮುಖ್ಯಾಂಶಗಳು

  • ನಗರದ ಗಾಂಧಿಭವನದಲ್ಲಿ ರಾಜ್ಯಮಟ್ಟದ ಕವಿ ಕಾವ್ಯಮೇಳ
  • ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಆಯೋಜನೆ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ಸಿನಿವಾಣಿಜ್ಯ ಸಾಹಿತ್ಯವು ಸ್ವಾಸ್ಥೃ ಸಮಾಜವನ್ನು ಕದಲಿಸುತ್ತಿವೆ ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.
ನಗರದ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕವಿ ಕಾವ್ಯಮೇಳ-ವಿವಿಧ ಕ್ಷೇತ್ರದ ಸಾಧಕರಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ಕ್ಷೇತ್ರದ ವಾಣಿಜ್ಯ ಸಾಹಿತ್ಯವು ಸ್ವಾಸ್ಥ ಸಮಾಜವನ್ನು ಕದಲಿಸಿ ಸಂಸ್ಕಾರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿವೆ. ಮನೋವಿಕಾರವನ್ನು ಪ್ರಚೋದನೆ ಮಾಡುತ್ತಿವೆ ಎಂದರು.
ಹಿಂದಿನ ಸಿನಿಮಾ ಗೀತೆ, ಗೀತೆ ರಚನಕಾರರ ಹಾಡುಗಳು ಸಮಾಜ, ಕುಟುಂಬ, ಮನಸ್ಸುಗಳನ್ನು ಬೆಸೆಯುತ್ತಿದ್ದವು, ಸೋಮಾರಿತನವನ್ನು ಬಡಿದೆಬ್ಬಿಸುತ್ತಿದ್ದವು. ಸಂಸ್ಕಾರದ ಮೌಲ್ಯಗಳನ್ನು ಬಿತ್ತರಿಸುತ್ತಿದ್ದವು. ಆದರೆ ಇಂದಿನ ಸಿನಿಮಾ ಗೀತೆಗಳು ಮನಸ್ಸುಗಳನ್ನು ದಾನವತ್ವದೆಡೆಗೆ ಸಾಗಿಸುತ್ತಿವೆ ಎಂದು ವಿಷಾದಿಸಿದರು.
ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಎಂ.ಗುರುಪ್ರಸಾದ್ ಮಾತನಾಡಿ, 12ನೇ ಶತಮಾನದ ವಚನ ಸಾಹಿತ್ಯ, ನಮ್ಮ ಪೂರ್ವಿಕರ ಜಾನಪದ ಸಾಹಿತ್ಯ ಇಂದಿಗೂ ಎಂದಿಗೂ ಪ್ರಸ್ತುತ. ಸಾಹಿತ್ಯ ಬದಲಾವಣೆ ತರುವಹ ಗಟ್ಟಿಸಾಹಿತ್ಯವಾಗಿರಬೇಕು, ಸಂಚಲನ ಸೃಷ್ಠಿಸಬೇಕು, ಸಹೃದಯಿಗಳ ಸೆಳೆಯವಂತಿರಬೇಕು ಎಂದು ಸಲಹೆ ನೀಡಿದರು.
ವೇದಿಕೆಯ ರಾಜ್ಯ ಕಾರ್ಯದರ್ಶಿ ಸಿ.ಜೆ.ಸುಜಾತಾಕೃಷ್ಣ ಮಾತನಾಡಿ, ಸಮಾಜಕಟ್ಟುವ ಕಾರ್ಯದಲ್ಲಿ ಸಾಹಿತಿಗಳ ಕೊಡುಗೆ ಅಪಾರ. ಭಾಷೆ-ಭಾವನೆ ಬೆಳೆವಣಿಗೆಗೆ ಸಾಹಿತ್ಯ ಅತ್ಯವಶ್ಯಕ. ಹೊಸತನ-ಹೊಸತಲೆಮಾರಿಗೆ ಇಂದಿನ ವಾಸ್ತವತೆ ಕಟ್ಟಿಕೊಡುವ ಸಾಮರ್ಧ್ಯ ಸಾಹಿತ್ಯಕ್ಕಿದೆ ಎಂದು ನುಡಿದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಕೆ.ಪಿ.ವೀರಪ್ಪ ಮಾತನಾಡಿ, ಜಾನಪದವಿಲ್ಲದೆ ಯಾವ ಸಾಹಿತ್ಯವೂ ಉತ್ತಮವಾಗದು. ಜನಪದವೇ ಎಲ್ಲದಕ್ಕೂ ಮೂಲಾಧಾರ. ಇಂದಿನ ಯುವಕವಿಗಳು, ಸಾಹಿತಿಗಳು ಜನಪದನ್ನು ಅಭ್ಯಾಸ ಮಾಡಬೇಕು, ಸಂಗ್ರಹಿಸಬೇಕು ಎಂದು ಹೇಳಿದರು.
ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಮೈಸೂರು ಮಹಾಜನ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಎಚ್.ಶ್ರೀಧರ್, ಜೆಡಿಸ್ ಮುಖಂಡ ಕಿರಣ್ ರಾಮಲಿಂಗೇಗೌಡ, ಸಾಹಿತಿ ಡಾ.ಪದ್ಮಾ ಶ್ರೀನಿವಾಸ್, ಪ್ರೊ.ಜೋಗಿಗೌಡ, ಚಿಕ್ಕತಿಮ್ಮಯ್ಯ, ಎಸ್.ಟಿ.ರಮೇಶ್, ಮಂಜುಳಾ ರಮೇಶ್, ಹಾವೇರಿ ನಾಗರಾಜು, ಶ್ಯಾಮಲತಾ, ಕ್ಷಮಾ ಇತರರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನೆ ಸಲ್ಲಿಸಲಾಯಿತು.