ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ವಾರ್ಷಿಕ ಪರೀಕ್ಷೆ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
- ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ
- ವಿವಿಧ ಇಲಾಖೆ ಅಧಿಕಾರಿಗಳು ಭಾಗಿ
ಮಂಡ್ಯ: ಜಿಲ್ಲೆಯಲ್ಲಿ ಮೇ 18ರಿಂದ 25ವರೆಗೆ ನಡೆಯಲಿರುವ ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಪಾರದರ್ಶಕವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1,813 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ. ಎಂಟು ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಹಾಗೂ ಸೈಬರ್ ಕೇಂದ್ರ ಮುಚ್ಚಲಾಗುವುದು. ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಯನ್ನು ಸಾಗಿಸುವಾಗ ಬಿಗಿ ಭದ್ರತೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರಶ್ನೆಪತ್ರಿಕೆ ಸಾಗುವ 8 ಮಾರ್ಗದಲ್ಲಿ ರೂಟ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಾಹನಗಳಗೆ ಕಡ್ಡಾಯವಾಗಿ ಜಿ.ಪಿ.ಎಸ್ ಅಳವಡಿಸಿರಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಬ್ಕಾಸ್ಟಿಂಗ್ ನಡೆಯಲಿದ್ದು, ಇದಕ್ಕಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷೆ ಸಿ.ಸಿ ಟಿವಿ ಕಣ್ಗಾವಲಿನಲ್ಲಿ ನಡೆಯಲಿದ್ದು, ಕ್ಯಾಮೆರಾಗಳನ್ನು ಪರೀಕ್ಷಾ ಕೊಠಡಿಗಳಿಗೆ ಈಗಾಗಲೇ ಅಳವಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷೆ ಸಮಯದಲ್ಲಿ ಸಿ.ಸಿ ಟಿವಿಗಳಲ್ಲಿ ತಾಂತ್ರಿಕ ದೋಷ ಉಂಟಾಗುತ್ತದೆ ಕ್ರಮ ವಹಿಸಬೇಕು. ಪರೀಕ್ಷೆ ನಡೆಯುವ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಹಾಗೂ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರದ ಜತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ. ಪ್ರತಿ ಪರೀಕ್ಷಾ ಕೇಂದ್ರಗೆ ಆರೋಗ್ಯ ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಗ್ರಾಮೀಣ ಭಾಗದಿಂದ ಮಕ್ಕಳು ಬರುವುದರಿಂದ ಬಸ್‌ಗಳು ಪರೀಕ್ಷಾ ದಿನದಂದು ವಿಳಂಬವಾಗದಂತೆ ಕ್ರಮ ವಹಿಸಿ. ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸ್ಮಾರ್ಟ್ ಡಿವೈಸ್‌ಗಳನ್ನು ಕೊಠಡಿಗೆ ತರಲು ಬೀಡಬೇಡಿ. ಪರೀಕ್ಷೆ ಮೇಲ್ವಿಚಾರಣೆಗೆ ನೇಮಿಸಿರುವ ಶಿಕ್ಷಕರು ಮಾರ್ಗಸೂಚಿಗೆ ಬದ್ಧರಾಗಿ ಕರ್ತವ್ಯ ಪಾಲಿಸಬೇಕು. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಚಿತ್ರೀಕರಣ ಮಾಡಲು ಯಾರಿಗೂ ಅನುಮತಿ ನೀಡಬಾರದು ಎಂದು ಹೇಳಿದರು.
ಸಭೆಯಲ್ಲಿ ಡಿಡಿಪಿ ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೌಭಾಗ್ಯಾ, ಮಹದೇವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಇತರರಿದ್ದರು.