ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಶನಿವಾರ ಜಮಾವಣೆಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ನೇತೃತ್ವದಲ್ಲಿ ತಹಸೀಲ್ದಾರ್ ಚೇತನಾ ಯಾದವ್ ಅವರ ಮೂಲಕ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು. ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಇತರರು ಉಪಸ್ಥಿತರಿದ್ದರು. 
ಮಂಡ್ಯ

ರಾಜ್ಯ ಸರ್ಕಾರ ವಜಾಗೆ ಬಿಜೆಪಿಗರ ಆಗ್ರಹ

ಶ್ರೀರಂಗಪಟ್ಟಣ: ಕಬ್ಬಿಗೆ ರಾಜ್ಯಾದ್ಯಂತ ಒಂದೇ ಖರೀದಿ ಬೆಲೆ ನೀತಿ ಜಾರಿ, ಹೈನುಗಾರರಿಗೆ ಪ್ರೋತ್ಸಾಹ ಧನ, ಕೃಷಿಕರ ಅನುಕೂಲಕ್ಕೆ ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಕೆಗೆ ದರ ನಿಗದಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಶನಿವಾರ ಜಮಾವಣೆಗೊಂಡ ಕಾರ್ಯಕರ್ತರು ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಹಾಗೂ ಕುರ್ಚಿ ಕಿತ್ತಾಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿದರು. ಜತೆಗೆ ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರ ಆಡಳಿತ ಜಾರಿಗೆ ಒತ್ತಾಯಿಸಿ ತಹಸೀಲ್ದಾರ್ ಚೇತನಾ ಯಾದವ್ ಮೂಲಕ ರಾಜಭವನಕ್ಕೆ ಪತ್ರ ರವಾನಿಸಿದರು.
ಬಳಿಕ ರೈತ ಮೋರ್ಚಾ ರಾಜ್ಯಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿದ್ದು, ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಒಂದು ದರ, ದಕ್ಷಿಣ ಕರ್ನಾಟಕದ ಬೆಳೆಗಾರರಿಗೆ ಬೇರೊಂದು ದರ ನಿಗದಿಪಡಿಸಿ ಮಲತಾಯಿ ಧೋರಣೆ ಮಾಡಬಾರದು. ಕಬ್ಬಿಗೆ ರಾಜ್ಯಾದಂತ ಒಂದೇ ಖರೀದಿ ದರ ನಿಗದಿಪಡಿಸಬೇಕು. ರಾಜ್ಯದಲ್ಲಿ 24 ಲಕ್ಷ ರೈತ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿದ್ದು, ಇವರಿಗೆ ರಾಜ್ಯ ಸರ್ಕಾರ 2023ರಲ್ಲಿ ಪ್ರಣಾಳಿಕೆಯಲ್ಲಿ ಮಾಡಿದ್ದ ಘೋಷಣೆಯಂತೆ 7 ರೂ. ಪ್ರೋತ್ಸಾಹ ಧನ ನೀಡಬೇಕು. ರೈತರ ಕೃಷಿ ಜಮೀನುಗಳಿಗೆ ಪರಿವರ್ತಕಗಳ ಅಳವಡಿಕೆಗೆ ಪಡೆಯಲಾಗುತ್ತಿರುವ 2ಲಕ್ಷ ರೂ. ನೀತಿ ರದ್ದುಮಾಡಿ, ಹಿಂದೆ ಬಿಜೆಪಿ ಸರ್ಕಾರ ರೈತರಿಗೆ ಸಹಕಾರಿಯಾಗಿದ್ದ ಮಾದರಿ ನೆರವಾಗಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ, ಜನರ ಮೇಲೆ ದಬ್ಬಾಳಿಕೆ ಅಧಿಕವಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ವಿದ್ಯಾಸಿರಿ, ಕಿಸಾನ್ ಸಮ್ಮಾನ್ ಯೋಜನೆಗಳನ್ನು ಮರು ಜಾರಿ ಮಾಡಬೇಕು. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಮೀಸಲಿರಿಸಿದ್ದ ನೂರಾರು ಕೋಟಿ ರೂ. ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ಇಂತಹ ಭ್ರಷ್ಟ ಹಾಗೂ ಲಜ್ಜಗೇಡಿ ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರ ಆಡಳಿತ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಗರಾಧ್ಯಕ್ಷ ಸುಧಾಕರ್, ರೈತ ಮೋರ್ಚಾ ಅಧ್ಯಕ್ಷ ಹನಿಯಾಂಬಡಿ ಸತೀಶ್, ಮಾಧ್ಯಮ ಸಂಚಾಲಕ ಕಿರಣ್ ಸಿಂಗ್, ಹೇಮಂತ್, ಪುರಸಭಾ ಸದಸ್ಯ ಗಂಜಾಂ ಶಿವು, ಎಸ್.ಟಿ.ರಾಜು, ಮುಖಂಡರಾದ ಮೇಳಾಪುರ ಪುಟ್ಟರಾಜು, ಪುಟ್ಟರಾಮು, ಶ್ರೀನಿವಾಸ್, ಉಮೇಶ್ ಕುಮಾರ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.