ಶ್ರೀರಂಗಪಟ್ಟಣ ತಾಲೂಕು ಚೊಟ್ಟನಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ದ್ವಿತಳಿ ಕ್ಷೇತ್ರೋತ್ಸವ, ರೈತರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮೈಸೂರಿನ ವಿಜ್ಞಾನಿ ಡಾ.ಜಾಯ್ಸಿರಾಣಿ ಮಾತನಾಡಿದರು.
ಶ್ರೀರಂಗಪಟ್ಟಣ : ರೇಷ್ಮೆ ಬೆಳೆ ರೈತಾಪಿ ಜನರ ಜೀವನ ಸುಧಾರಣೆ ಜತೆಗೆ ಸುಸ್ಥಿರ ಆರ್ಥಿಕಾಭಿವೃದ್ಧಿ ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಮೈಸೂರಿನ ವಿಜ್ಞಾನಿ ಡಾ.ಜಾಯ್ಸಿರಾಣಿ ತಿಳಿಸಿದರು.
ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ, ರೇಷ್ಮೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ದ್ವಿತಳಿ ಕ್ಷೇತ್ರೋತ್ಸವ, ರೈತಾಪಿ ಜನರಿಗೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಾಗಿ ಸಾಂಪ್ರದಾಯಿಕ ಬೆಳೆಗಳಾದ ಕಬ್ಬು ಮತ್ತು ಭತ್ತದ ಜತೆಗೆ ಕೆಲವೆಡೆ ತೋಟಗಾರಿಕೆ ಬೆಳೆಗೆ ಮಾನ್ಯತೆ ನೀಡಿದ್ದಾರೆ. ಇದರ ಜತೆಗೆ ರೇಷ್ಮೆ ಬೆಳೆಯನ್ನೂ ಪರಿಗಣಿಸಬೇಕು.
ಖರ್ಚುವೆಚ್ಚದ ಅನುಗುಣವಾಗಿ ರೇಷ್ಮೆ ಕೃಷಿಗೆ ಮುಂದಾಗಿ, ಕಡಿಮೆ ನೀರಾವರಿ ಸೌಲಭ್ಯ ಮತ್ತು ನೂತನ ತಾಂತ್ರಿಕಗಳನ್ನು ಅಳವಡಿಸಿಕೊಂಡರೆ ಇದು ಅತ್ಯಂತ ಲಾಭದಾಯಕ ಕೃಷಿಯಾಗಲಿದೆ ಎಂದರು.
ರೈತಾಪಿ ಜೀವನದ ಸ್ಥಿತಿ-ಗತಿಯನ್ನು ಆರ್ಥಿಕವಾಗಿ ಉತ್ತಮ ಪಡಿಸಲು ರೇಷ್ಮೆ ಬೇಸಾಯ ನೆರವಾಗಲಿದೆ. ಇದರೊಂದಿಗೆ ಸಮಗ್ರ ಕೃಷಿ ನೀತಿಯಲ್ಲಿ ಈ ಬೆಳೆಯೊಂದಿಗೆ ಇತರೆ ಬೆಳೆಗಳನ್ನು ಬೆಳೆದಲ್ಲಿ ಅದು ಮಣ್ಣಿಗೂ ಫಲವತ್ತತೆ ನೀಡುತ್ತದೆ ಎಂದು ಸಲಹೆ ನೀಡಿದರು.
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಲಿಂಗಪ್ಪ ಹೂಗಾರ ಮಾತನಾಡಿ ರೈತರು ಅದರಲ್ಲೂ ಮುಖ್ಯವಾಗಿ ರೇಷ್ಮೆ ಬೆಳೆಗಾರರು ಆರೋಗ್ಯ ಸುರಕ್ಷತೆಗೆ ಗಮನಹರಿಸಬೇಕು ಎಂದರು. ಸಸಿಗಳಿಗೆ ಕ್ರಿಮಿನಾಶಕ ಹಾಗೂ ರೇಷ್ಮೆ ಹುಳುಗಳಿಗೆ ಸೋಂಕು ನಿವಾರಣೆ ಔಷಧ ಸಿಂಪಸಿಡುವ ಸಂದರ್ಭ ರೈತರು ತಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಬೇಖು. ಕೈಗಳಿಗೆ ರಕ್ಷಾ ಕವಚ, ಮೂಗು ಮತ್ತು ಬಾಯಿಗೆ
ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕು. ಕುಟುಂಬಸ್ಥರ ಆರೋಗ್ಯದ ಕಡೆಗೂ ಹೆಚ್ಚು ಗಮನ ನೀಡಬೇಕು ಎಂದರು.
ಸಿಎಸ್‌ಆರ್ ಟಿಐನ ಹಿರಿಯ ಹಿರಿಯ ತಾಂತ್ರಿಕ ಸಹಾಯಕ ಡಾ.ಜಸ್ಟೀನ್ ಕುಮಾರ ಅ್ವರು ರೇಷ್ಮೆ ಹುಳುಗಳಿಗೆ ತಗುಲುವ ರೋಗಗಳು ಹಾಗೂ ಅದರ ತಡೆ ಮತ್ತು ನಿವಾರಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು. ಮಂಡ್ಯದ ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್ ಅಧ್ಯಕ್ಷ ಹಾಗೂ ಪ್ರಗತಿಪರ ರೈತ ಜೋಗಿಗೌಡ ಮಣ್ಣಿನ ಫಲವತ್ತತೆ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಆರ್. ಕೃಷ್ಣ, ಕೊಡಿಯಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಮಹದೇವು, ರೇಷ್ಮೆ ಇಲಾಖೆ ಉಪನಿರ್ದೇಶಕ ಸುಂದರ್ ರಾಜ್ ಇದ್ದರು. ಮಂಡ್ಯ ಮಿಮ್ಸ್ನ 10ಕ್ಕೂ ಹೆಚ್ಚು ವೈದ್ಯರು ಗ್ರಾಮದ 150 ಜನರಿಗೆ ಆರೋಗ್ಯ ತಪಾಸಣೆ ನಡೆಸಿದರು. ಸಂಬಂಧಪಟ್ಟ ಕಾಯಿಲೆಗಳಿಗೆ ಉಚಿತ ಔಷಧವನ್ನೂ ವಿತರಣೆ ಮಾಡಿದರು.
ಗ್ರಾಪಂ ಉಪಾಧ್ಯಕ್ಷೆ ಸಿ.ಕೆ.ಇಂದಿರಾ, ಸದಸ್ಯೆ ರಮ್ಯಾ, ರೇಷ್ಮೆ ನೀರಿಕ್ಷಕ ವೆಂಕಟೇಶ, ವಿಸ್ತರಣಾಧಿಕಾರಿ ಮಂಗಪ್ಪ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.