ಮೇಲುಕೋಟೆಯ ಪೇಶುಂ ರಾಮಾನುಜರು
ಮೇಲುಕೋಟೆ: ಸಮಾನತೆಯ ಹರಿಕಾರ ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರ ಮಹೋತ್ಸವ ಏ.22ರಂದು ವೈಭವದಿಂದ ನೆರವೇರಲಿದೆ. ಮಹಾರಥೋತ್ಸವ 21ರಂದು ನಡೆಯಲಿದೆ. ಈ ಸಂಬಂಧ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ.13ರಿಂದ ಆರಂಭವಾಗಲಿವೆ.
ಹತ್ತು ದಿನಗಳು ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮಾನುಜಾಚಾರ್ಯರಿಗೆ ವೈವಿಧ್ಯಮಯ ಅಲಂಕಾರ ಮಾಡಲಾಗುತ್ತದೆ. ಮೊದಲ ದಿನ ಪುಷ್ಪಾಲಂಕೃತ ಸಮರಭೂಪಾಲ ವಾಹನೋತ್ಸವದೊಂದಿಗೆ ಉತ್ಸವ ಆರಂಭವಾಗಲಿದೆ. ಈ ನಿಮಿತ್ತ ಚೆಲುವನಾರಾಯಣಸ್ವಾಮಿ ದೇವಾಲಯದ ಪೂಜಾ ಕೈಂಕರ್ಯಗಳು ಹತ್ತು ದಿನಗಳ ಕಾಲ ಬೆಳಗ್ಗೆ 5.30ಕ್ಕೆ ಆರಂಭವಾಗಲಿವೆ. ಪ್ರತಿದಿನ ಬೆಳಗ್ಗೆ 8ಗಂಟೆಗೆ ವಿವಿಧ ವಾಹನೋತ್ಸವಗಳು ದಿವ್ಯಪ್ರಬಂಧ ಪಾರಾಯಣ ಮಂಗಳವಾದ್ಯದೊಡನೆ ಚತುರ್ವೀದಿಗಳಲ್ಲಿ ನಡೆಯಲಿದೆ. ನಂತರ ವಾಹನೋತ್ಸವ ಮಂಟಪದಲ್ಲಿ ತಿರುವಾರಾಧನೆ ಮತ್ತು ಗೋಷ್ಠಿ ನಡೆಯಲಿದೆ.
ಹತ್ತು ದಿನಗಳ ತಿರುನಕ್ಷತ್ರ ಮಹೋತ್ಸವಲ್ಲಿ 14ರಂದು ಹಂಸವಾಹನ, 15ರಂದು ಸೂರ್ಯಮಂಡಲವಾಹನೋತ್ಸವ, 16ರಂದು ಚಂದ್ರಮಂಡಲವಾಹನೋತ್ಸವ, 17ರಂದು ಅಶ್ವವಾಹನೋತ್ಸವ, ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, 18ರಂದು ಶ್ರೀ ಪೆಂಬುದೂರಿನ ಮಾಲೆ ಮರ್ಯಾದೆ ಸಮರ್ಪಣೆ, ರಾತ್ರಿ ಗೋವಿಂದರಾಜಮುಡಿ ಉತ್ಸವ ನಡೆಯಲಿದೆ. 19ರಂದು ಅಶ್ವವಾಹನೋತ್ಸವ, 20ರಂದು ಗಜವಾಹನ, 21ರಂದು ಬೆಳಗ್ಗೆ ಮಹಾರಥೋತ್ಸವ ನಡೆಯಲಿದೆ.
22ರಂದು ರಾಮಾನುಜರ 1009ನೇ ತಿರುನಕ್ಷತ್ರ ಮಹೋತ್ಸವ ನಡೆಯಲಿದ್ದು ಮಧ್ಯಾಹ್ನ 10ಗಂಟೆಗೆ ದ್ವಾದಶಾರಾಧನೆಯೊಂದಿಗೆ ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆಯಲಿದೆ. ಸಂಜೆ ಶ್ರೀಗಂಧದ ಅಲಂಕಾರ ರಾತ್ರಿ ಚೆಲುವನಾರಾಯಣಸ್ವಾಮಿಗೆ ದಶಾವತಾರ ಮಹೋತ್ಸವ ವೈಭವದಿಂದ ನಡೆಯಲಿದೆ.
22ರಂದು ಇಡೀ ದಿನ ರಾಮಾನುಜರ ಜಯಂತ್ಯುತ್ಸವ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳನ್ನು ಅನುಸರಿಸಿ ದೇವರ ದರ್ಶನ ಪಡೆದು ಸಹಕರಿಸಬೇಕು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್, ಪರಿಚಾರಕ ಹಾಗೂ ಪಾರುಪತ್ತೇಗಾರ್ ಎಂ.ಎನ್‌ಪಾರ್ಥಸಾರಥಿ ಮನವಿ ಮಾಡಿದ್ದಾರೆ.
ಅನುದಾನ ಇಲ್ಲ: ರಾಮಾನುಜರ ಜಯಂತ್ಯುತ್ಸವಕ್ಕೆ ಯಾವುದೇ ಸರ್ಕಾರ ಈವರೆಗೆ ಯಾವ ವರ್ಷವೂ ಅನುದಾನ ಬಿಡುಗಡೆ ಮಾಡಿಲ್ಲ. ಕನಿಷ್ಠ ಆಚಾರ್ಯರ ಕೊಡುಗೆ ಸ್ಮರಿಸುವ ಕಾರ್ಯವನ್ನೂ ಮಾಡಿಲ್ಲ.
ರಾಮಾನುಜರು ಆದಿಶೇಷನ ಅವತಾರವೆಂಬ ಪ್ರತೀತಿಯಿದ್ದು, ಶ್ರೀ ವೈಷ್ಣವರು ರಾಮಾನುಜರಿಗೆ ಅಭಿಷೇಕ ನೆರವೇರಿಸುವ ಮೂಲಕ ಸರ್ಪದೋಷ ನಿವಾರಣೆ ಮಾಡಿಕೊಳ್ಳುತ್ತಾರೆ. ತಿರುನಕ್ಷತ್ರ ಮಹೋತ್ಸವ ಅಂಗವಾಗಿ 13 ರಿಂದ 21ರವರೆಗೆ ಪ್ರತಿದಿನ ರಾಮಾನುಜಾಚಾರ್ಯರಿಗೆ ಅಭಿಷೇಕ ನೆರವೇರುತ್ತದೆ. ಮೇ 22ರಂದು ರಾಮಾನುಜರಿಗೆ ದ್ವಾದಶಾರಾಧನೆಯೊಂದಿಗೆ ಮಹಾಭಿಷೇಕ ನೆರವೇರುತ್ತದೆ. ಭಕ್ತರು ಅಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು.