ಶ್ರೀ ಪಟ್ಟಲದಮ್ಮ ದೇವಿ ಜಾತ್ರಾ ಮಹೋತ್ಸವ ಅರ್ಚಕ ಕೃಷ್ಣಪ್ಪ ಕೊಂಡ ಹಾಯ್ದರು. 
ಮಂಡ್ಯ

ಶ್ರೀ ಪಟ್ಟಲದಮ್ಮನ ಜಾತ್ರಾ ಮಹೋತ್ಸವಕ್ಕೆ ತೆರೆ

ಹಲಗೂರು: ಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಗಳ ಗ್ರಾಮ ದೇವತೆ ಶ್ರೀ ಪಟ್ಟಲದಮ್ಮ ದೇವಿ ಜಾತ್ರಾ ಮಹೋತ್ಸವ ಶನಿವಾರ ಬೆಳಗ್ಗೆ ಕೊಂಡೋತ್ಸವದೊಂದಿಗೆ ಸಂಪನ್ನಗೊಂಡಿತು.
ನಾಲ್ಕು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ನಿತ್ಯ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಗುರುವಾರ ವಿವಿಧ ಪೂಜೆ-ಪುನಸ್ಕಾರಗಳ ನಡೆದವು. ಶುಕ್ರವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಹೋಮ-ಹವನ ನಡೆಸಿ ದೇವರಿಗೆ ಅಭಿಷೇಕ, ಅಲಂಕಾರ, ನೈವೇದ್ಯ ಮಾಡಿ ಮಧ್ಯಾಹ್ನ 12ಗಂಟೆಗೆ ಮಹಾ ಮಂಗಳಾರತಿ ಸಲ್ಲಿಸಲಾಯಿತು. ಆ ದಿನ ಹರಕೆ ಹೊತ್ತ ಮುತ್ತೈದೆಯರು ಹೆಸರು ಬೇಳೆ ಕೋಸಂಬರಿ, ಪಾನಕ ಮಾಡಿಕೊಂಡು ಮುತ್ತೈದೆಯರಿಗೆ ಅರಿಶಿಣ, ಕುಂಕುಮ ವಿನಿಮಯ ಮಾಡಿಕೊಂಡರು. ಅದೇ ದಿನ ಸಂಜೆ ಕರಿ ಬೀದಿಯಲ್ಲಿರುವ ಕರಗದ ಮನೆಯಿಂದ ಓಲೆ ಬಂಡಿ ಎಳವಾರವನ್ನು ಮೆರವಣಿಗೆಯಲ್ಲಿ ಪ್ರಮುಖ ರಸ್ತೆಗಳ ಕರೆತರಲಾಯಿತು. ಪೂಜಾ ಕುಣಿತ, ವೀರಗಾಸೆ ಕುಣಿತ, ಬೊಂಬೆ ಕುಣಿತ, ಕರಡಿ ವೇಷಗಳು ಗಮನ ಸೆಳೆದವು.
ಶನಿವಾರ ಬೆಳಗ್ಗೆ 3 ಗಂಟೆಗೆ ನಡು ಕೇರಿ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಿಂದ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು. ಹೂವು ಹೊಂಬಾಳೆ ಮಾಡಿಕೊಂಡು ದೇವರ ಗಿಂಡಿಯನ್ನು ಪೂಜೆ ಮಾಡಿಸಿ ಅರ್ಚಕರಾದ ಕೃಷ್ಣಪ್ಪ ಹೊತ್ತು ಹೊರಟಾಗ ಅರ್ಚಕರುಗಳಾದ ನಾಗರಾಜು, ವಿದ್ವಾನ್ ಪ್ರಸಾದ್, ಮಹಿಳೆಯರು ತಂಬಿಟ್ಟಿನ ಆರತಿ ಹಿಡಿದು ಬಸಪ್ಪ ದೇವರ ಜೊತೆ ಪಟ್ಟಲದಮ್ಮ ದೇವಸ್ಥಾನಕ್ಕೆ ತೆರಳಿದರು.
ಮೆರವಣಿಗೆಯ ನಂತರ ಅರ್ಚಕರು ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಣೆ ಹಾಕಿ, ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳು ನಡೆದ ನಂತರ ಅರ್ಚಕರು ದೇವರ ಗಿಂಡಿಯನ್ನು ಹೊತ್ತುಕೊಂಡು ಕೊಂಡ ಹಾಯ್ದರು. ಇದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಕಂಡಿತು.