ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ನಿರ್ಮಿಸಿರುವ ಶ್ರೀಗುರುಭೈರವೈಕ್ಯ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಬೆಳ್ಳಿಯ ನವಿಲನ್ನು ಉಡುಗೊರೆಯಾಗಿ ಶ್ರೀಮಠದ ವತಿಯಿಂದ ನೀಡಿದರು. 
ಮಂಡ್ಯ

ಭಕ್ತರಿಗೆ ಆಶಿರ್ವದಿಸಿದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ

ನಾಗಮಂಗಲ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಬುಧವಾರ ‘ಶ್ರೀ ಗುರು ಭೈರವೈಕ್ಯ ಮುಂದಿರ’ ಲೋಕಾರ್ಪಣೆ ವೇದಿಕೆ ಕಾರ್ಯಕ್ರಮ ಮುಗಿದ ನಂತರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀಗುರುಭೈರವೈಕ್ಯ ಮಂದಿರದ ದರ್ಶನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಬಿಸಿಲನ್ನು ಲೆಕ್ಕಿಸದೆ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆಯುತ್ತಿದ್ದರಿಂದ ಪೊಲೀಸರು ಹಾಗೂ ಮಠದ ಸಿಬ್ಬಂದಿ ಅವರನ್ನು ಸಾಲಿನಲ್ಲಿ ದರ್ಶನಕ್ಕೆ ಕಳುಹಿಸಲು ಹರಸಾಹಸ ಪಡಬೇಕಾಯಿತು. ಪ್ರಧಾನಿ ಮೋದಿ ಅವರು ನಿರ್ಗಮಿಸಿದ ನಂತರ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರೀಗುರುಭೈರವೈಕ್ಯ ಮಂದಿರದಲ್ಲಿ ಭಕ್ತರಿಗೆ ಆಶೀರ್ವಾದ ನೀಡಿದರು.
ಶ್ರೀಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಬೆಳಗಾವಿ, ತುಮಕೂರು, ವಿಜಯಪುರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಹಿಳೆಯರು, ವಿದ್ಯಾರ್ಥಿಗಳು, ವೃದ್ದರು ಆಗಮಿಸಿದ್ದ್ದರು.
ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಆದಿಚುಂಚನಗಿರಿ ಮಠದ ವತಿಯಿಂದ ವೇದಿಕೆಯಲ್ಲಿ ಬೆಳ್ಳಿಯ ನವಿಲನ್ನು ಉಡುಗೊರೆಯಾಗಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ನೀಡಿದರು. ಉಡುಗೊರೆಯಾಗಿ ನವಿಲನ್ನು ನೀಡಿದ್ದರ ಉದ್ದೇಶ ಶ್ರೀಆದಿಚುಂಚನಗಿರಿ ಮಠದ ಐಕಾನ್ ನವಿಲು ಆಗಿದ್ದು, ಅದರ ಜತೆಗೆ ಆದಿಚುಂಚನಗಿರಿಯನ್ನು ನವಿಲುಧಾಮವೆಂದು ಕೂಡ ಕರೆಯಲಾಗುತ್ತದೆ. ಆದ್ದರಿಂದ ಶ್ರೀಮಠದ ಐಕಾನ್ ಆಗಿರುವ ನವಿಲನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.