ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲದ ಹೊರ ನೋಟ
ಮದ್ದೂರು: ಬಡವರ ಕಾಶಿ ಎಂದೇ ಪ್ರಸಿದ್ಧಿ ಹೊಂದಿರುವ ತಾಲೂಕಿನ ಕೀಳಘಟ್ಟ ಗ್ರಾಮದ ಶ್ರೀ ನಂಜುಂಡೇಶ್ವರ ಸ್ವಾಮಿ ದೇಗುಲ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಸುಂದರವಾದ ಪರಿಸರ ಮಧ್ಯೆ ದೇಗುಲವಿದ್ದು, ಭಕ್ತಾದಿಗಳ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿಗೆ ಬಂದು ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ. ಅದರಲ್ಲೂ ಕೌಟುಂಬಿಕ ಕಲಹ, ವ್ಯಾಜ್ಯಗಳ ಸಮಸ್ಯೆಗಳು ಪರಿಹಾರ, ವಿವಾಹ ಹಾಗೂ ಸಂತಾನ ಪ್ರಾಪ್ತಿ ಈಡೇರುತ್ತವೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಯಡಿಯೂರು, ದಾವಣಗೆರೆ, ತುಮಕೂರು, ರಾಮನಗರ ಸೇರಿದಂತೆ ಇತರ ಹೊರ ರಾಜ್ಯಗಳಲ್ಲೂ ಅಪಾರ ಭಕ್ತ ವೃಂದವಿರುವುದು ವಿಶೇಷ.
ಅಮಾವಾಸ್ಯೆ, ಹುಣ್ಣಿಮೆ, ಪ್ರತಿ ಸೋಮವಾರ ಹಾಗೂ ಗುರುವಾರ ದೇಗುಲದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗುತ್ತದೆ. ವಿಶೇಷವಾಗಿ ಹುಣ್ಣೆಮೆಯ ದಿನ ಇಷ್ಟಾರ್ಥಗಳು ಈಡೇರಿದ ಭಕ್ತರು ದೇಗುಲಕ್ಕೆ ಆಗಮಿಸಿ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಅನ್ನ ಸಂತರ್ಪಣೆ, ಶಿವರಾತ್ರಿ ಹಬ್ಬದಂದು ಶಿಂಷಾನದಿಯಿಂದ ಹೂವು ಹೊಂಬಾಳೆ ತಂದು ಗ್ರಾಮದಲ್ಲಿ ಅದ್ದೂರಿಯಾಗಿ ದೇವರ ಮೆರಣಿಗೆ ನಡೆಸಲಾಗುತ್ತದೆ. ಪ್ರತಿ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ ಮಾಡಲಾಗುತ್ತದೆ. ದೇಗುಲದಲ್ಲಿ ಮತ್ತೊಂದು ವಿಶೇಷವೆಂದರೆ ಇಲ್ಲಿನ ಬಸವ ಬಲಗಾಲು ನೀಡಿ ಅಶೀರ್ವಾದ ಮಾಡಿದರೆ ಹರಕೆಗಳು ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ.
ಕಡು ಬಡವರಾಗಿದ್ದ ಮಂಡಣ್ಣನವರ ಕುಟುಂಬದಲ್ಲಿ ಅವರ ಮಗ ನಂಜುಂಡಯ್ಯನವರ ಮೂಲಕ ಭಗವಂತನು, ನಿಮ್ಮ ಮನೆಯಲ್ಲಿ ಪ್ರತಿ ಸೋಮವಾರ ನನ್ನ ಪೂಜೆಯಾಗಬೇಕು, ನಾನು ಕುರುಹು ಕೊಡುವ ಜಾಗದಲ್ಲಿ ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಯಬೇಕು ಎಂದು ಹೇಳುತ್ತಾರೆ. ಆದರೆ ತಿನ್ನಲು ಊಟಕ್ಕೆ ಪರದಾಡಬೇಕಾಗಿದ್ದ ಆ ಸಮಯದಲ್ಲಿ ಪೂಜೆ ಮಾಡುವ ಸಾವಧಾನವಾದರೂ ಹೇಗೆಂದು ಅವರ ಮನೆಯವರು ಸುಮ್ಮನಾಗುತ್ತಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೆಲವೊಮ್ಮೆ ತಿಥಿ ಮಾಡಿ ಬಿಟ್ಟಿದ್ದ ನೈವೇದ್ಯವೇ ಆಹಾರವಾಗಿರುತ್ತದೆ. ಹೀಗಿರುವಾಗ ಪದೇ ಪದೆ ದೇವಸ್ಥಾನದ ಸ್ಥಾಪನೆ ಬಗ್ಗೆ ಸೂಚನೆಗಳು ಸಿಕ್ಕುತ್ತಲೇ ಹೋಗುತ್ತವೆ.
1999ರ ನವೆಂಬರ್ 24ರ ಕಾರ್ತಿಕ ಸೋಮವಾರ ಕುರುಹು ಸಿಕ್ಕ ಒಂದು ಜಾಗದಲ್ಲಿ ಲಿಂಗವನ್ನು ಪ್ರತಿಷ್ಠಾಪಿಸುತ್ತಾರೆ. ನಂತರ ಅದೇ ಜಾಗದಲ್ಲಿ ಎರಡು ಬಿಲ್ವಪತ್ರೆ ಗಿಡಗಳು ಹುಟ್ಟಿ, ಹುತ್ತವೂ ಮೂಡಿದೆ. ಶ್ರೀ ಕಾಳಮಾರಮ್ಮ ಮತ್ತು ಶ್ರೀ ಮಂಚಮ್ಮ ದೇಗುಲದ ಮಧ್ಯಭಾಗದಲ್ಲಿ ನಂಜುಂಡೇಶ್ವರಸ್ವಾಮಿ ದೇಗುಲವಿದೆ. 2000ರಲ್ಲಿ ಶಿವರಾತ್ರಿ ದಿನದಂದು ದೇವಸ್ಥಾನದ ಉದ್ಘಾಟನೆಯಾಗಿದ್ದು, ದೇವರ ಪ್ರತಿಷ್ಠಾಪನೆಯನ್ನು ಹಂಪೆಯ ವಿರೂಪಾಕ್ಷ ದೇವಸ್ಥಾನದ ಶ್ರೀ ಆದಿಶಂಕರಚಾರ್ಯ ಅಭಿನಂದನಾ ನರಸಿಂಹ ಭಾರತೀ ಸ್ವಾಮೀಜಿ ನೆರವೇರಿಸಿದ್ದಾರೆ.
ಗುಡ್ಡಪ್ಪನವರಿಗೆ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳಿಂದ ಲಿಂಗಧಾರಣೆಯಾಗಿದ್ದು, ಅಂದಿನಿಂದ ಪ್ರತಿ ಸೋಮವಾರ ಹಾಗೂ ಗುರುವಾರ ಅನ್ನದಾನ ಪ್ರಾರಂಭಿಸಲಾಗಿದೆ. ನಂತರ ಪ್ರತಿ ಹುಣ್ಣಿಮೆ, ಕಾರ್ತಿಕ ಸೋಮವಾರ ಹಾಗೂ ಶಿವರಾತ್ರಿಯಂದು ಅನ್ನದಾನ ನಡೆಸಿಕೊಂಡು ಬರಲಾಗುತ್ತಿದೆ. ಅನೇಕ ರೋಗರುಜಿನ ಕಳೆಯುವ ವೈದ್ಯನಾಗಿ ನೆಲೆಗೊಂಡು ಅಪಾರ ಭಕ್ತ ವೃಂದದ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಬಡವರ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ.
\ದೇವಾಲಯದ ಬಳಿ ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸಹಸ್ರಾರು ಮದುವೆಗಳು ಸರಳವಾಗಿ ನಡೆಯುತ್ತವೆ. ಇದರ ಜತೆಗೆ ಅನ್ನದಾಸೋಹ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಸ್ವಾಮಿಯ ರಥ ನಿರ್ಮಾಣವಾಗುತ್ತಿದೆ. ಭಕ್ತರ ಸಹಕಾರದೊಂದಿಗೆ ನಮ್ಮ ಶ್ರೀ ನಂಜುಂಡೇಶ್ವರಸ್ವಾಮಿ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಅನ್ನ, ಅಕ್ಷರ, ಆಶ್ರಯಕ್ಕೆ ಹೆಚ್ಚು ಒತ್ತು ಕೊಟ್ಟು ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಾಗುತ್ತಿದೆ.