ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ವಿದ್ಯಾರ್ಥಿಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಹಲಗೂರು: ಶಾಲಾ, ಕಾಲೇಜುಗಳಲ್ಲಿ ಆಯೋಜಿಸುವ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಹೇಳಿದರು.
ಚನ್ನಪಟ್ಟಣ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯದ ಸಂಪತ್ತು ದ್ವಿಗುಣಗೊಳ್ಳಬೇಕಾದರೆ ಕ್ರೀಡಾ ಚಟುವಟಿಕೆಗಳಿಂದ ಮಾತ್ರ ಸಾಧ್ಯ. ಜಗತ್ತಿನ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶವೆಂದರೆ ಭಾರತ. ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಾದಾಗ ರಾಷ್ಟ್ರೀಯ ಶಕ್ತಿಯು ಹೆಚ್ಚುತ್ತದೆ ಎಂದು ತಿಳಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ ಟಿ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ, ಆದ್ಯತೆ ನೀಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.
100 ಮೀಟರ್, 400 ಮೀಟರ್ ಓಟದ ಸ್ಪರ್ಧೆ, ಗುಂಡು ಎಸೆತ, ಡಿಸ್ಕಸ್ ಥ್ರೋನಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೊ.ಸುಧಾ ಬಿದರಿ, ಬಿ.ಸಿ.ರವಿ, ಅತಿಥಿ ಉಪನ್ಯಾಸಕಿ ಡಾ.ಸೀಮಾ ಕೌಸರ್, ಡಾ.ಶಂಕರೇಗೌಡ, ಗುರುಪ್ರಸಾದ್, ತಾರಾ, ಜಯಲಕ್ಷ್ಮೀ, ಕುಮಾರಸ್ವಾಮಿ, ಮೂರ್ತಿ, ಮಧುಕುಮಾರ್, ಪ್ರಶಾಂತ್, ರಮ್ಯಾ, ಭವ್ಯಾ, ಚೇತನಾ ಇತರರು ಇದ್ದರು.