ಹಲಗೂರು ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಉದ್ಘಾಟಿಸಿದರು. ಎ.ಎಸ್.ದೇವರಾಜು, ಎನ್.ಎಂ.ಪುಟ್ಟಸ್ವಾಮಿ, ಶ್ರೀನಿವಾಸ, ದಯಾನಂದ, ಅನುರಾಧಾ ಇದ್ದರು.
ಹಲಗೂರು: ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಸ್ಪರ್ಧಿ ಕ್ರೀಡಾಪಟುಗಳ ಸಾಮರ್ಥ್ಯ ಹಾಗೂ ಅವರಲ್ಲಿರುವ ದೌರ್ಬಲ್ಯ ತಿಳಿದುಕೊಂಡು ಆಟವಾಡಿದರೆ ಎಂತಹ ಬಲಿಷ್ಠ ತಂಡವನ್ನಾದರೂ ಸೋಲಿಸಬಹುದು ಎಂದು ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಹೇಳಿದರು.
ಚನ್ನಪಟ್ಟಣ ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಲಗೂರು ಹೋಬಳಿ ಮಟ್ಟದ 14 ವರ್ಷದೊಳಗಿನ ಬಾಲಕ, ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಕ್ರೀಡಾಚಟುವಟಿಕೆ ಸಹಕಾರಿ. ಕ್ರೀಡೆಗಳು ಮಕ್ಕಳಲ್ಲಿ ಶಿಸ್ತು, ನಾಯಕತ್ವ ಗುಣ, ಆತ್ಮವಿಶ್ವಾಸ ಹಾಗೂ ವಿವಿಧ ಕೌಶಲಗಳನ್ನು ಬೆಳೆಸುತ್ತದೆ ಎಂದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಎದುರಾಳಿಯ ಸಾಮರ್ಥ್ಯ ಮತ್ತು ದೌರ್ಬಲ್ಯ ಅರಿತು ಉತ್ತಮ ಪ್ರದರ್ಶನ ನೀಡಬೇಕು. ಪ್ರತಿಯೊಬ್ಬರೂ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.
ತಾಲೂಕು ಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗೆ ಅಗತ್ಯ ತರಬೇತಿ ನೀಡಲು ದೈಹಿಕ ಶಿಕ್ಷಣ ಶಿಕ್ಷಕರ ತಂಡ ಸಜ್ಜಾಗಿದೆ ಎಂದರು.
ಗುರು ಶಿಷ್ಯರ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಎನ್.ಎಂ.ಪುಟ್ಟಸ್ವಾಮಿ, ತಾಲೂಕು ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ, ಶಿಕ್ಷಣ ಸಂಯೋಜಕ ದಯಾನಂದ, ಕೆಪಿಎಸ್ ಉಪಪ್ರಾಂಶುಪಾಲೆ ಅನುರಾಧಾ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ನಾಗರತ್ನಾ, ಮುಖ್ಯ ಶಿಕ್ಷಕ ಕುಳ್ಳಯ್ಯ, ಬಾಬು, ಚೆಲುವರಾಜು, ಶಿವಕುಮಾರ್, ಜಿ.ಎಸ್.ಕೃಷ್ಣ, ತಿಮ್ಮಯ್ಯ, ಶಂಕರೇಗೌಡ ಇದ್ದರು.