ಪಾಂಡವಪುರ ಪಟ್ಟಣದ ವಿಜಯ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ವಿಜಯ ಪ್ರೋ ಕಬ್ಬಡಿ ಪಂದ್ಯಾವಳಿ ಸಮಾರಂಭದಲ್ಲಿ ಸಿ.ಎಸ್.ಪುಟ್ಟರಾಜು ಅವರು ಕ್ರೀಡಾಪಟುಗಳನ್ನು ಪರಿಚಹಿಸಿಕೊಂಡರು. ಟಿಸಿದರು. ಗೌ.ಕಾರ್ಯದರ್ಶಿ ಕೆ.ವಿ.ಬಸವರಾಜು ಇದ್ದರು. 
ಮಂಡ್ಯ

ವಿದ್ಯಾಪ್ರಚಾರ ಸಂಘದಿಂದ ಕ್ರೀಡಾ ಅಕಾಡೆಮಿ ಆರಂಭ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾ ಪ್ರಚಾರ ಸಂಘದ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಭರವಸೆ
ಪಾಂಡವಪುರ: ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿದ್ಯಾಪ್ರಚಾರ ಸಂಘದಲ್ಲಿ ಕ್ರೀಡಾ ಅಕಾಡೆಮಿ ಆರಂಭಿಸಿ ಅದಕ್ಕೆ ತಗಲುವ ವೆಚ್ಚವನ್ನು ಎಸ್‌ಟಿಜಿ ಚಾರಿಬಟಲ್ ಟ್ರಸ್ಟ್ ನಿಂದ ಭರಿಸಲಾಗುವುದು ಎಂದು ವಿದ್ಯಾ ಪ್ರಚಾರ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು.
ಪಟ್ಟಣದ ಕಾಲೇಜಿನ ಆವರಣದಲ್ಲಿ ವಿದ್ಯಾ ಪ್ರಚಾರ ಸಂಘದ ವಿಜಯ ಪ್ರಥಮ ದರ್ಜೆ ಹಾಗೂ ಪದವಿ ಪೂರ್ಣ ಕಾಲೇಜಿನ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪದವಿ ಪೂರ್ವ, ಪದವಿ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್, ಬಿಇಡಿ, ಬಿಪಿ.ಇಡಿ ಕಾಲೇಜು ವಿದ್ಯಾರ್ಥಿಗಳಿಗೆ ವಿಜಯ ಕಬಡ್ಡಿ ಪ್ರೋ ಲೀಗ್-2025 ವಿಜಯ ಕಪ್ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದರು.
ವಿದ್ಯಾ ಪ್ರಚಾರ ಸಂಘ ಆರಂಭವಾಗಿ 80 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಂದಿನ 2026ರಲ್ಲಿ ಸಂಸ್ಥೆಯ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಮೊದಲಬಾರಿಗೆ ವಿಜಯ ಕಪ್ ಪ್ರೋ ಕಬಡ್ಡಿ ಲೀಗ್ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಕಬಡ್ಡಿ ಪಂದ್ಯಾವಳಿಗಳು ನಡೆಯಲಿವೆ, ಕ್ರೀಡೆ ಎಂದರೆ ಶಿಸ್ತು ಕ್ರೀಡಾಪಟುಗಳು ಶಿಸ್ತು ಬೆಳೆಸಿಕೊಳ್ಳಬೇಕು, ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ಕ್ರೀಡಾಪಟುಗಳು ಉತ್ತಮವಾಗಿ ಆಟವಾಡುವ ಮೂಲಕ ಕ್ರೀಡಾಸ್ಫೂರ್ತಿ ಮೆರೆಯಬೇಕು, ಮುಂದಿನ ದಿನಗಳಲ್ಲಿ ಇದೇ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕ್ರಿಕೆಟ್‌ಗೆ ಮಾರುಹೋಗುತ್ತಿರುವ ಪ್ರಸ್ತುತ ದಿನಗಳಲ್ಲಿ ಕಬಡ್ಡಿ ಕ್ರೀಡೆಯೂ ಸಹ ಕ್ರಿಕೆಟ್‌ಗೆ ಸರಿಸಮಾನವಾಗಿ ರಾಜ್ಯ, ರಾಷ್ಟ್ರ ಹಾಗೂ ವಿಶ್ವಮಟ್ಟದಲ್ಲಿ ಬೆಳೆದು ದಾಪುಗಾಲು ಹಾಕುತ್ತಿದೆ. ಕಬಡ್ಡಿ, ಖೋ-ಖೋ ಸೇರಿದಂತೆ ಮಕ್ಕಳು ಎಲ್ಲ ತರಹದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಉದ್ದೇಶದಿಂದ ನಮ್ಮ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಲು ವಿದ್ಯಾ ಪ್ರಚಾರದ ಸಂಘದ ವತಿಯಿಂದಲೇ ಕ್ರೀಡಾ ಅಕಾಡೆಮಿಯನ್ನು ಆರಂಭಿಸಲಾಗುವುದು, ವಾರ್ಷಿಕವಾಗಿ ಅದಕ್ಕೆ ತಗಲುವ ವೆಚ್ಚವನ್ನು ನಮ್ಮ ಎಸ್‌ಟಿಜಿ ಚಾರಿಟಬಲ್ ಟ್ರಸ್ಟ್ ವತಿಯಿಂದಲೇ ಭರಿಸಲಾಗುವುದು ಎಂದು ಭರವಸೆ ನೀಡಿದರು.
ಸಂಸ್ಥೆಯ ಗೌ. ಕಾರ್ಯದರ್ಶಿ ಕೆ.ವಿ.ಬಸವರಾಜು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಗೌ. ಕಾರ್ಯದರ್ಶಿ ಕೆ.ವಿ.ಬಸವರಾಜು ಹಾಗೂ ಆಡಳಿತ ಮಂಡಳಿ, ತಂಡಗಳ ಮಾಲೀಕರು, ತೀರ್ಪುಗಾರರು, ಉಪನ್ಯಾಸಕ ವರ್ಗ ಸೇರಿದಂತೆ ಎಲ್ಲರನ್ನೂ ಗೌರವಿಸಲಾಯಿತು.
ಎರಡು ದಿನಗಳ ಕಾಲ ನಡೆಯುವ ಪ್ರೋ ಕಬಡ್ಡಿ ಲೀಗ್‌ನಲ್ಲಿ 8 ತಂಡಗಳು ಭಾಗವಹಿಸಲಿವೆ. ಸಂಸ್ಥೆಯ ಉಪಾಧ್ಯಕ್ಷೆ ಶಾಂತಮ್ಮ, ಖಜಾಂಚಿ ಎನ್.ರಾಮೇಗೌಡ, ಸಹಕಾರ್ಯದರ್ಶಿ ಗೋಪಾಲ್, ನಿರ್ದೇಶಕರಾದ ಪಿ.ಎಸ್.ಲಿಂಗರಾಜು, ಕೆ.ಸೋಮೇಗೌಡ, ಎಂ.ಎಸ್.ಮರಿಸ್ವಾಮೀಗೌಡ, ನಿವೃತ್ತ ಪ್ರಾಂಶುಪಾಲ ಚಿಕ್ಕಾಡೆ ಪ್ರಕಾಶ್, ಬಿಇಡಿ ಪ್ರಾಂಶುಪಾಲ ಡಾ.ಎನ್.ಕೆ.ವೆಂಕಟೇಗೌಡ, ಪ್ರೊ.ಎಂ.ಕೃಷ್ಣಮೂರ್ತಿ, ಕೆ.ಆರ್.ಮಹದೇವಯ್ಯ, ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ್, ಭೀಮೇಶ್ ಬಾಬು, ಉಪನ್ಯಾಸಕ ಎಸ್.ಎಂ.ಗುರುಸ್ವಾಮಿ, ದೈ.ಶಿ.ನಿರ್ದೇಶಕರಾದ ಎಸ್.ನಂದೀಶ್, ಡಿ.ಆರ್.ನಂದೀಶ್, ಮಂಜುನಾಥ್ ಹಾಜರಿದ್ದರು.