ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಮವಾಸ್ಯೆ ವಿಶೇಷ ಪೂಜೆ ನಡೆಯಿತು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಸೋಮನಾಥ ಸ್ವಾಮೀಜಿ, ಸಚಿವ ಎಚ್.ಸಿ.ಬಾಲಕೃಷ್ಣ ಇದ್ದರು.
ತಾಲೂಕಿನ ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಭೀಮನ ಅಮವಾಸ್ಯೆ ಅಂಗವಾಗಿ ವಿಶೇಷ ಪೂಜೆ ನಡೆಯಿತು.
ಶ್ರೀ ಕಾಲಭೈರವೇಶ್ವರಸ್ವಾಮಿ, ಸ್ಥಂಭಾಭಿಕೆ ದೇವಿಗೆ ಪೂಜೆ ಸಲ್ಲಿಸಿ ತದನಂತರ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಗದ್ದುಗೆ ಶ್ರೀಗುರು ಭೈರವೈಕ್ಯ ಮಂದಿರದಲ್ಲಿ ಪೂಜೆ ಸಲ್ಲಿಸಲಾಯಿತು. ಅಮವಾಸ್ಯೆ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಬೂದುಕುಂಬಳ ದೀಪಗಳನ್ನು ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು. ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ದೇವಾಲಯದ ಆವರಣದಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿ ಹಾಗೂ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಉತ್ಸವ ಮೂರ್ತಿಗಳಿದ್ದ ಬೆಳ್ಳಿ ರಥಗಳನ್ನು ಶ್ರೀಗಳ ನೇತೃತ್ವದಲ್ಲಿ ಭಕ್ತರು ಎಳೆದು ಪ್ರದಕ್ಷಿಣೆ ಹಾಕುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಆದಿಚುಂಚನಗಿರಿ ಮಠದಲ್ಲಿ ನಡೆದ ಅಮವಾಸ್ಯೆ ವಿಶೇಷ ಪೂಜೆಯಲ್ಲಿ ಸಚಿವ ಎಚ್.ಸಿ.ಬಾಲಕೃಷ್ಣ ಕುಟುಂಬ ಸಮೇತ ಪಾಲ್ಗೊಡು ಶ್ರೀಕಾಲಭೈರವೇಶ್ವರಸ್ವಾಮಿ ದರ್ಶನ ಪಡೆದರು. ನಂತರ ಶ್ರೀಗುರು ಭೈರವೈಕ್ಯ ಮಂದಿರದಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡು ನಂತರ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದರು.
ಪೂಜಾ ಕೈಂಕರ್ಯಗಳು ಮುಗಿದ ನಂತರ ಅನ್ನದಾಸೋಹ ನಡೆಯಿತು. ಈ ಸಂದರ್ಭ ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ, ಶ್ರೀಸೋಮನಾಥ ಸ್ವಾಮೀಜಿ, ಭಕ್ತರು ಇದ್ದರು.