ಕಿಕ್ಕೇರಿ ಚಿಕ್ಕ ನರಸಿಂಹಸ್ವಾಮಿ ದೇಗುಲದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಿ, ವೈಕುಂಠ ಉತ್ತರ ದ್ವಾರ ಬಾಗಿಲು ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಲಾಗಿತ್ತು.  
ಮಂಡ್ಯ

ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ

ನಾಗೇಶ ಎಸ್
ಕಿಕ್ಕೇರಿ: ಧಾರ್ಮಿಕ ಆಚರಣೆಯಲ್ಲಿ ಪವಿತ್ರ ಮಾಸವಾದ ಧರ್ನುಮಾಸದಲ್ಲಿನ ವೈಕುಂಠ ಏಕಾದಶಿ ಅಂಗವಾಗಿ ಮಂಗಳವಾರ ವಿಷ್ಣು ದೇವಾಲಯಗಳಲ್ಲಿ ವಿವಿಧ ಪೂಜಾ ಕೈಂಕರ್ಯ, ಅಭಿಷೇಕಗಳು ನಡೆದದವು.
ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಚಲಿಸುವ ಪುಣ್ಯಮಾಸದ ವಿಶೇಷ ದಿನದಲ್ಲಿ ಭಕ್ತರು ದೇಗುಲದ ಪ್ರವೇಶದ್ವಾರವನ್ನು ಭಕ್ತಿಯಿಂದ ನಮಿಸಿ ಒಳಪ್ರವೇಶಿಸಿದರು. ಇಲ್ಲಿನ ಸಿದ್ದಾರೂಢಸ್ವಾಮಿ ಮಠ, ನರಸಿಂಹಸ್ವಾಮಿ ದೇಗುಲ, ವೀರಾಂಜನೇಯ ದೇಗುಲದಲ್ಲಿ ಭಕ್ತರು ಜಮಾಯಿಸಿದ್ದರು. ದೇಗುಲಗಳಲ್ಲಿ ನಿರ್ಮಿಸಲಾಗಿದ್ದ ವೈಕುಂಠ ಉತ್ತರದ್ವಾರ ಬಾಗಿಲು ಮೂಲಕ ಪ್ರವೇಶಿಸಿ ದೇವರ ದರ್ಶನ ಪಡೆದು ಪುನೀತರಾದರು.
ಗೋವಿಂದ, ನಾರಾಯಣ ಎಂಬ ಜಯಘೋಷದೊಂದಿಗೆ ದೇಗುಲದಲ್ಲಿ ಶಂಖನಾದ ಮೊಳಗಿತು. ಅರ್ಚಕ ವೃಂದದವರು ದೇವರಿಗೆ ಪಂಚಾಮೃತ ಅಭಿಷೇಕ, ವಿವಿಧ ಪೂಜಾಲಂಕಾರ ಸೇವೆಗಳನ್ನು ಮಾಡಿ ಲೋಕಕಲ್ಯಾಣಾರ್ಥ ಪ್ರಾರ್ಥಿಸಿದರು. ದೇವರಿಗೆ ವಿವಿಧ ಪರಿಮಳ ಪುಷ್ಪ, ಆಭರಣಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆಯಲು ಭಕ್ತರು ಉತ್ಸುಕರಾಗಿದ್ದರು.
ವಿವಿಧ ದೇಗುಲಗಳಲ್ಲಿ ಸಿಹಿಬೂಂದಿ, ಲಡ್ಡು, ಮೊಸರನ್ನ, ರಸಾಯನ, ಪುಳಿಯೋಗರೆ, ತೀರ್ಥ ಪ್ರಸಾದ ನೀಡಲಾಯಿತು. ಗದ್ದೆಹೊಸೂರಿನ ಅಭಯವೆಂಕಟರಮಣಸ್ವಾಮಿ, ಗೋವಿಂದನಹಳ್ಳಿ ವೇಣುಗೋಪಾಲಸ್ವಾಮಿ, ಕೃಷ್ಣಾಪುರದ ಚಲುವನಾರಾಯಣಸ್ವಾಮಿ, ಚಿಕ್ಕಳಲೆ ಲಕ್ಷ್ಮೀನರಸಿಂಹಸ್ವಾಮಿ, ಬೋಳಮಾರನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಮಾರುತಿ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿಸಲಾಯಿತು.