ಹಲಗೂರಿನಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳಿಂದ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಲಗೂರು: ಇಲ್ಲಿನ ಮುತ್ತತ್ತಿ ರಸ್ತೆಯಲ್ಲಿರುವ ವಿದ್ಯಾಗಣಪತಿ ದೇವಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ವತಿಯಿಂದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಬೇಕು ಎಂದು ಅಭಿಮಾನಿಗಳು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ಯುವ ಮುಖಂಡ ಲಿಂಗಪಟ್ಟಣದ ಗಂಗಾಧರ್ ಮಾತನಾಡಿ, ಪಕ್ಷದ ಏಳಿಗೆಗಾಗಿ ತಮ್ಮ ತನು, ಮನ, ಧನವನ್ನು ಮುಡಿಪಾಗಿಟ್ಟು ಶ್ರಮಿಸಿರುವ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದರ ಮೂಲಕ ಉಳಿದ ಅಧಿಕಾರ ಅವಧಿಯನ್ನು ಅವರಿಗೆ ಬಿಟ್ಟು ಕೊಡಬೇಕು. ಐದು ವರ್ಷಗಳ ಕಾಲ ರಾಜ್ಯ ಸುತ್ತಿ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ವಿಶ್ವಾಸ ಗಳಿಸಿ ಪಕ್ಷ ಬಲಪಡಿಸಿದ ಪರಿಣಾಮ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ 2023 ರಲ್ಲಿ ಅಧಿಕಾರಕ್ಕೆ ಬಂತು. ಮುಖ್ಯಮಂತ್ರಿ ಆಗುವ ಅವಕಾಶ ಇದ್ದರೂ, ಅರ್ಧ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಮಾಡಲಾಗಿದೆ. ಉಳಿದ ಅವಧಿಗೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿದರು.
ಯುವ ಮುಖಂಡ ಶಿವಕುಮಾರ್( ಶಿವಪ್ಪ) ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜನಪ್ರಿಯತೆ ನೋಡಿ ಜನರು ಅವರಿಗೆ ಜನಾದೇಶ ನೀಡಿದ್ದಾರೆ ಎಂದು ಸತ್ಯ ಮರೆಮಾಚಲಾಗುತ್ತಿದೆ. ಆದರೆ ವಾಸ್ತವವಾಗಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ ಮಂಡ್ಯ ಜಿಲ್ಲೆಯ ಮತದಾರರು ಜೆಡಿಎಸ್ ಸೋಲಿಸಿ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಇಂತಹದೇ ಕ್ಲಿಷ್ಟ ಪರಿಸ್ಥಿತಿಯನ್ನು ಪಕ್ಷ ಎದುರಿಸಬೇಕಾಗುತ್ತದೆ ಎಂದರು.
ಮುಖಂಡರಾದ ರವಿಗೌಡ, ತಮ್ಮಣ್ಣಗೌಡ, ಸುರೇಶ್, ಮರಿಸ್ವಾಮಿ, ಗಂಗಾಧರ್, ಶಿವಪ್ಪ, ಚಂದನ್, ಬಿ.ಟಿ.ರವಿಕುಮಾರ್, ಬಿ.ಎಚ್.ರಮೇಶ್, ಜಗದೀಶ್, ಮಂಜು, ಕೃಷ್ಣ, ಶಿವಸ್ವಾಮಿ, ಮನು, ನಿಖಿಲ್, ಎಚ್.ಎಸ್.ಕೃಷ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು..