- ಚೆಲುವನಾರಾಯಣಸ್ವಾಮಿ ಕ್ಷೇತ್ರ ಜೀರ್ಣೋದ್ಧಾರಗೊಂಡ ಹಿನ್ನೆಲೆ
ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದಿವ್ಯಕ್ಷೇತ್ರ ಜೀರ್ಣೋದ್ಧಾರಗೊಂಡ ವಿಶ್ವಾವಸುನಾಮ ಸಂವತ್ಸರದ ವಾರ್ಷಿಕ ವಿಶೇಷ ತೈ ಪುನರ್ವಸು ಉತ್ಸವ ಜ.31ರಂದು ವೈಭವದಿಂದ ನಡೆಯಲಿದೆ.
ರಾಮಾನುಜಾಚಾರ್ಯರು ಯದುಗಿರಿಯ ಬೆಟ್ಟದಮೇಲೆ ಕಗ್ಗತ್ತಲ ಕಾಡಿನ ಮಧ್ಯೆಯಿದ್ದ ಹುತ್ತ ಕರಗಿಸಿ ಚೆಲುವನಾರಾಯಣಸ್ವಾಮಿಯ ದಿವ್ಯಮಂಗಳ ರೂಪವನ್ನು ಮಕರ ಶುಕ್ಲ ಪುನರ್ವಸು ನಕ್ಷತ್ರದಂದು ಜಗತ್ತಿಗೆ ಪ್ರಕಾಶ ಪಡಿಸಿದ್ದರು. ನಂತರ ಕರ್ನಾಟಕದ ಧೀಮಂತ ಅರಸ ವಿಷ್ಣುವರ್ಧನನಿಂದ ದೇಗುಲ ನಿರ್ಮಿಸಿದ್ದರು. ಈ ಕಾರಣ ಪ್ರತಿವರ್ಷ ತೈ ಪುನರ್ವಸು ಉತ್ಸವ ನಡೆಯುತ್ತಾ ಬಂದಿದೆ. ಪುನರ್ವಸು ಅಂಗವಾಗಿ ಮೇಲುಕೋಟೆ ದೇವಾಲಯದಲ್ಲಿ ಇಡೀ ದಿನ ಧಾರ್ಮಿಕ ಕೈಂಕರ್ಯಗಳು ನೆರವೇರಲಿದ್ದು ಶ್ರೀ ಭಾಷ್ಯಕಾರ ಸನ್ನಿಧಿ ವೆಂಗೀಪುರಂ ನಂಬಿ ಮನೆತನ ಪ್ರತಿವರ್ಷ ಈ ಮಹೋತ್ಸವವನ್ನು ವೈಭವದಿಂದ ನಡೆಸಿಕೊಂಡು ಬರುತ್ತಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್ ನೇತೃತ್ವದಲ್ಲಿ ಉತ್ಸವದ ಕೈಂಕರ್ಯಗಳು ನಡೆಯಲಿದ್ದು, ಪುನರ್ವಸು ಉತ್ಸವಕ್ಕಾಗಿ ದೇವಾಲಯ ಸಜ್ಜುಗೊಳ್ಳುತ್ತಿದೆ.
ಶನಿವಾರ ಬೆಳಗ್ಗೆ 4 ಗಂಟೆಗೆ ರಾಮಾನುಜರಿಗೆ ಅಭಿಷೇಕ, 6 ಗಂಟೆಗೆ ಕಲ್ಯಾಣಿಗೆ ಉತ್ಸವ, 8.30ಕ್ಕೆ ಶ್ವೇತವಸ್ತ್ರಧಾರಣೆ, ಗಧ್ಯತ್ರಯಗೋಷ್ಠಿ, ತಿರುಪ್ಪಾವೈ ಶಾತ್ತುಮೊರೆ ನಡೆದು 10 ಗಂಟೆಗೆ ದೇವಾಲಯಕ್ಕೆ ರಾಮಾನುಜರ ಉತ್ಸವ ಆರಂಭವಾಗಲಿದೆ. 12 ಗಂಟೆಗೆ ದೇವಾಲಯದ ರಾಜಗೋಪುರದ ಬಳಿ ರಾಮಾನುಜ ನೂತ್ತಂದಾದಿ ಶಾತ್ತುಮೊರೆ ನಡೆಯಲಿದೆ. ಹುತ್ತಕರಗಿಸಿ ರಾಮಾನುಜರು ತಿರುನಾರಾಯಣನನ್ನು ಕಂಡು ನಿಜವಾದ ಬೆಳಕುಕಂಡೆ, ನಾರಾಯಣನ ದರ್ಶನ ಮಾಡಿದೆ ಎಂದು ತಮಿಳಿನಲ್ಲಿ ಸ್ತುತಿಸಿದ ಪಾಶುರದ ಪಾರಾಯಣ ನಡೆಯಲಿದೆ. 12.30ಕ್ಕೆ ವೆಂಗೀಪುರಂ ಮನೆತನದಿಂದ ಸ್ವಾಮಿಗೆ ನೂರಾರು ತಟ್ಟೆಗಳಲ್ಲಿ ಫಲಪುಷ್ಪ ಸಮರ್ಪಣೆ ನಡೆಯಲಿದೆ.1.30 ರ ವೇಳೆಗೆ ತಿರುವಾರಾಧನೆ, ತೀರ್ಥಗೋಷ್ಠಿಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ರಾತ್ರಿ ಪೂಜೆಯ ನಂತರ ರಾಮಾನುಜರ ಉತ್ಸವ ಸ್ವಸ್ಥಾನಕ್ಕೆ ತಲುಪಲಿದೆ. ಇದಕ್ಕೂ ಮುನ್ನಾದಿನ ಶುಕ್ರವಾರ ಬೆಳಗ್ಗೆ ಆರಿದ್ರಾ ಮಾಸ ತಿರುನಕ್ಷತ್ರದ ಅಂಗವಾಗಿ ರಾಮಾನುಜಾಚಾರ್ಯರಿಗೆ ಅಭಿಷೇಕ ಸಂಜೆ ಬೆಳ್ಳಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನೆರವೇರಲಿದೆ. ರಾತ್ರಿ ಚೆಲುವನಾರಾಯಣಸ್ವಾಮಿಗೆ ಮಹಾಲಕ್ಷ್ಮಿಸನ್ನಿಧಿಗೆ ಶುಕ್ರವಾರ ಉತ್ಸವ ಸಹ ನಡೆಯಲಿದೆ.
ಜ.31 ರಂದು ಪುನರ್ವಸು ಉತ್ಸವದ ಧಾರ್ಮಿಕ ಕೈಂಕರ್ಯ ನಡೆಯುವ ಹಿನ್ನೆಲೆಯಲ್ಲಿ ಸಂಜೆ 4 ಗಂಟೆಯವರೆಗೆ ಭಕ್ತರಿಗೆ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಧಾರ್ಮಿಕ ಕೈಂಕರ್ಯಗಳು ಮುಕ್ತಾಯವಾದ ನಂತರ ದರ್ಶನಕ್ಕೆ ಅವಕಾಶವಿದೆ. ಆದರೆ ಯೋಗಾನರಸಿಂಹ ದೇವಾಲಯದಲ್ಲಿ ದೇವರದರ್ಶನ ಎಂದಿನಂತೆ ಇರಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ತಿಳಿಸಿದ್ದಾರೆ.
ರಾಮಾನುಜಾಚಾರ್ಯರ ಪುನರ್ವಸು ಉತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಜತೆಗೆ ಚೆಲುವನಾರಾಯಣನ ದರ್ಶನವೂ ಇರುವುದಿಲ್ಲ. ನೂರಾರು ಸಂಖ್ಯೆಯ ವಾಹನಗಳು ಕ್ಷೇತ್ರಕ್ಕೆ ಬರುವ ಕಾರಣ ಉತ್ಸವ ಬೀದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿ ಉತ್ಸವ ಸುಗಮವಾಗಿ ನಡೆಯಲು ಸಹಕಾರ ನೀಡುವ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಭಕ್ತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಸೂಕ್ತವ್ಯವಸ್ಥೆ ಮಾಡಬೇಕೆಂದು ಕೈಂಕರ್ಯ ಪರರು ಮನವಿ ಮಾಡಿದ್ದಾರೆ.