ಸಂಕ್ರಾಂತಿ ಹಬ್ಬ ಅಂಗವಾಗಿ ಮದ್ದೂರು ನಗರದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿರುವುದು. 
ಮಂಡ್ಯ

ಮದ್ದೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ

ಮದ್ದೂರು: ಸುಗ್ಗಿ ಹಬ್ಬ ಮಕರ ಸಂಕ್ರಾತಿ ಹಬ್ಬದ ಅಂಗವಾಗಿ ನಗರ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ, ಶ್ರೀ ಉಗ್ರ ನರಸಿಂಹಸ್ವಾಮಿ, ಶ್ರೀ ಹೊಳೆ ಆಂಜನೇಯಸ್ವಾಮಿ, ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ, ಶ್ರೀ ರಾಘವೇಂದ್ರಸ್ವಾಮಿ ಮಠ ಹಾಗೂ ತಾಲೂಕಿನ ಚಿಕ್ಕಂಕನಹಳ್ಳಿ ಶ್ರೀನಂದಿಬಸವೇಶ್ವರಸ್ವಾಮಿ, ವೈದ್ಯನಾಥಪುರದ ಶ್ರೀ ವೈದ್ಯನಾಥೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಎಳ್ಳು ಬೀರಿದ ಪುಟಾಣಿಗಳು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪುಟಾಣಿಗಳು ಮಕ್ಕಳು ಹಾಗೂ ಮಹಿಳೆಯರು ಬಣ್ಣ ಬಣ್ಣದ ಹೊಸ ವಸ ತೊಟ್ಟು ಮನೆ ಮನೆಗೆ ತೆರಳಿ ಎಳ್ಳು ಬೀರಿದ್ದು ವಿಶೇಷವಾಗಿತ್ತು.
ರಾಸುಗಳನ್ನು ಕಿಚ್ಚು: ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯಂದು ನಗರ ಸೇರಿದಂತೆ ತಾಲೂಕಿನಾದ್ಯಂತ ರೈತರು ತಮ್ಮ ಎತ್ತು, ಹಸು, ಕುರಿ, ಮೇಕೆಗಳನ್ನು ಸ್ವಚ್ಛ ಮಾಡಿ ಸುಂದರವಾಗಿ ಅಲಂಕಾರಗೊಳಿಸಿ, ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬೆಂಕಿಯಲ್ಲಿ ಕಿಚ್ಚು ಹಾಯಿಸಿದ್ದು ಕಂಡುಬಂತು.
ನಗರದ ವಿಶ್ವೇಶ್ವರಯ್ಯ ನಗರದ ಕೆಮ್ಮಣ್ಣುನಾಲೆ ಬಳಿ ಸಮಾಜ ಸೇವಕ ಎಂ.ಯಶವಂತ್ ಅವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಂಕ್ರಾಂತಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಹಲವಾರು ಜಾನುವಾರುಗಳಿಗೆ ಪೊಂಗಲ್ ತಿನ್ನಿಸಲಾಯಿತು. ಸಂಜೆ ಸಂಕ್ರಮಣನಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸಲಾಯಿತು.
ಕೆಲವು ಜಾನುವಾರುಗಳು ಬೆಂಕಿಯಲ್ಲಿ ಧೈರ್ಯವಾಗಿ ಕಿಚ್ಚು ಹಾಯ್ದರೆ ಇನ್ನು ಕೆಲವು ಜಾನುವಾರುಗಳು ಬೆಂಕಿ ನೋಡಿ ಹೆದರಿಕೊಂಡು ಬೆಂಕಿ ಪಕ್ಕ ನಡೆದುಕೊಂಡು ಹೋದ ದೃಶ್ಯವೂ ಕಂಡುಬಂತು.ಜಾನುವಾರುಗಳ ಸಂಖ್ಯೆ ದಿನಂದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೊದಲಿದ್ದ ಸಂಕ್ರಾಂತಿ ಸಂಭ್ರಮ ಈಗ ಕಂಡುಬರಲಿಲ್ಲ.