ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿಗೆ ಹಣ್ಣಿನ ಅಲಂಕಾರ ಮಾಡಿರುವುದು 
ಮಂಡ್ಯ

ಹಲಗೂರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಪೂಜಾ ಕೈಂಕರ್ಯ
ಹಲಗೂರು : ಹಲಗೂರಿನ ವಿದ್ಯಾಗಣಪತಿ ದೇವಸ್ಥಾನ ಸೇರಿದಂತೆ ಗ್ರಾಮದ ಹಲವು ದೇವಸ್ಥಾನಗಳಲ್ಲಿ ಕಡೇ ಕಾರ್ತಿಕ ಮಾಸದ ಅಂಗವಾಗಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಇಲ್ಲಿನ ನಡುಕೇರಿ ವೀರಭದ್ರ ಸ್ವಾಮಿ, ಮುತ್ತತ್ತಿ ರಸ್ತೆಯಲ್ಲಿರುವ ಸೋಮೇಶ್ವರ ಸ್ವಾಮಿ, ಗ್ರಾಮದೇವತೆ ಪಟ್ಟಲದಮ್ಮ, ಶಂಭುಲಿಂಗೇಶ್ವರ, ಕಾಳಿಕಾಂಬ, ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನಗಳಲ್ಲಿ ದೇವರ ಮೂರ್ತಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕಗಳನ್ನು ನಡೆಸಿ ವಿವಿಧ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜಾ ನಡೆಸಲಾಯಿತು.
ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನದ ಬಸಪ್ಪನಿಗೆ ಸೇಬು, ಮೋಸಂಬಿ, ಸೀಬೆ ಕಾಯಿ, ಕಲ್ಲಂಗಂಡಿ ಹಣ್ಣು ಸೇರಿದಂತೆ ಇತರ ಹಣ್ಣುಗಳಿಂದ ಅಲಂಕರಿಸಿರುವುದು ವಿಶೇಷವಾಗಿತ್ತು. ಎಲ್ಲ ದೇವಸ್ಥಾನಗಳಲ್ಲಿ ಭಕ್ತರ ದಂಡೇ ಹರಿದುಬಂದಿತ್ತು. ತಮ್ಮ ಇಷ್ಟಾರ್ಥ ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ ನಂತರ ಬಂದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.