ಹನುಮದ್ ವ್ರತದ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಹನುಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.
- ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
- ಕೋಟೆ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ
ಮಳವಳ್ಳಿ: ಹನುಮದ್ ವ್ರತದ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಹನುಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.
ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ ಮೊದಲನೇ ವರ್ಷದ ಹನುಮದ್ ವ್ರತ ಆಚರಣೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ದೇವಸ್ಥಾನವಿರುವ ಬೀದಿಯ ಪ್ರವೇಶ ದ್ವಾರವನ್ನು ಅಲಂಕಾರಿಕ ದೀಪಾಲಂಕಾರ ಹಾಗೂ ಹೂವುಗಳಿಂದ ಸಿಂಗರಿಸಲಾಗಿತ್ತು.
ದೇವಸ್ಥಾನದ ಗರ್ಭಗುಡಿಯಲ್ಲಿರುವ ವೀರಾಂಜನೇಯ ಮೂರ್ತಿಗೆ ಅರ್ಚಕರು ಬೆಳಗಿನಿಂದಲೇ ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿ ತುಳಸಿ, ವೀಳ್ಯದೆಲೆ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಮಹಾ ಮಂಗಳಾರತಿ ಮಾಡಿದರು. ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ನೆರೆದ ಭಕ್ತ ಸಮೂಹಕ್ಕೆ ಭಕ್ತ ಮಂಡಳಿ ವತಿಯಿಂದ ಉಪಾಹಾರ ವಿತರಣೆ ಮಾಡಿದರು.
ಸಂಜೆ ಪ್ರಮುಖ ಬಡಾವಣೆಗಳಲ್ಲಿ ರಾಮ, ಸೀತೆ ಹಾಗೂ ಆಂಜನೇಯಸ್ವಾಮಿ ಭಾವಚಿತ್ರ ಮೆರವಣಿಗೆ ಮಂಗಳವಾದ್ಯದೊಡನೆ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ಹಲಗೂರು ಹೋಬಳಿಯ ಇತಿಹಾಸ ಪ್ರಸಿದ್ಧ ಮುತ್ತತ್ತಿ ಆಂಜನೇಯಸ್ವಾಮಿ, ಬೆಳಕವಾಡಿ ಸಮೀಪದ ಚಿಕ್ಕ ಮುತ್ತತ್ತಿ ಹಾಗೂ ವಿವಿಧ ಗ್ರಾಮಗಳ ರಾಮ ಮಂದಿರ ಮತ್ತು ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಮತ್ತು ಮೆರವಣಿಗೆ ನಡೆಯಿತು.