ಮಂಡ್ಯದಲ್ಲಿ ಆಯೋಜಿಸಿದ್ದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.  
ಮಂಡ್ಯ

ಜೂ.20ರಿಂದ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಜೂ.20 ರಿಂದ ಅ.7 ವರೆಗೆ ನಡೆಯುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ
  • ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ
ಮಂಡ್ಯ: ಭಾರತ ಚುನಾವಣಾ ಆಯೋಗ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ ಜೂ.20 ರಿಂದ ಅ.7 ವರೆಗೆ ನಡೆಯುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮತದಾರರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಸಿಬ್ಬಂದಿ ಒಳಗೊಂಡಂತಹ ಪಾರದರ್ಶಕ ಹಾಗೂ ಪಾಲ್ಗೊಳ್ಳುವಿಕೆಯ ಪ್ರಕ್ರಿಯೆಯಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪರಿಷ್ಕರಣೆಯ ಮುಖ್ಯ ಉದ್ದೇಶ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸುವುದು ಮತ್ತು ಅನರ್ಹರನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡುವುದಾಗಿದೆ. ಜೂ.30ರಿಂದ ಜೂ.29ರವರೆಗೆ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಜೂ.30ರಿಂದ ಜು.29ರವರೆಗೆ ಮತಗಟ್ಟೆ ಅಧಿಕಾರಿಗಳಿಂದ ಮನೆ-ಮನೆ ಸಮಿಕ್ಷೆ, ಗಣತಿ ನಮೂನೆಗಳನ್ನು ಮತದಾರರಿಗೆ ಹಂಚುವುದು ಮತ್ತು ಸಂಗ್ರಹಸುವ ಕಾರ್ಯ ನಡೆಯಲಿದೆ. ಅಂತರ್ಜಾಲದ ಮೂಲಕ ಮತದಾರರು ಗಣತಿ ನಮೂನೆಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜು.29ರಂದು ಮತಗಟ್ಟೆ ಪುನರ್ ವಿಂಗಡಣೆ ಸಂಬಂಧ ನಿಯಾಮನುಸಾರ ಪ್ರಸ್ತಾವನೆಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.
ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟ, 5ರಿಂದ ಸೆ.4ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅಂತೆಯೇ 5ರಿಂದ ಅ.3ರವರೆಗೆ ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ, ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಗಣತಿ ನಮೂನೆಯನ್ನು ಸಹಿ ಮಾಡದೆ ಬಿಎಲ್ಒ ಅವರಿಗೆ ನೀಡದೆ ಇದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗುವುದಿಲ್ಲ. ಅಂತಹವರಿಗೆ ನೋಟಿಸ್ ನೀಡಿ ಹಕ್ಕು ಆಕ್ಷೇಪಣೆ ಅವಧಿಯಲ್ಲಿ ಮತದಾರರು ಆಯೋಗವು ನಿಗದಿಪಡಿಸಿರುವ 12 ವಿವಿಧ ದಾಖಲೆಗಳಲ್ಲಿ ಒಂದು ದಾಖಲೆ ನೀಡಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಹೊಸ ಅರ್ಜಿ ನೀಡಬಹುದು ಎಂದು ವಿವರಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪ್ರತೀಕ ಹೆಗ್ಡೆ, ಚುನಾವಣಾ ತಹಸೀಲ್ದಾರ್ ಸಿ.ಜೆ. ರವಿಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಆಮ್ ಆದ್ಮಿ ಪಕ್ಷದ ಬೂದನೂರು ಬೊಮ್ಮಯ್ಯ, ಬಿಎಸ್ಪಿಯ ಶಿವಶಂಕರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಸನ್ನಕುಮಾರ್, ಸಿಪಿಐಎಂನ ಸಿ.ಕುಮಾರಿ ಇತರರಿದ್ದರು.

ಪ್ರತಿ ಮನೆಗೆ ಮೂರು ಬಾರಿ ಭೇಟಿ
ಬಿಎಲ್ಒಗಳು ಕನಿಷ್ಟ ಮೂರು ಬಾರಿ ಮನೆ ಮನೆಗೆ ಭೇಟಿ ನೀಡಲಿದ್ದು, ಒಂದು ವೇಳೆ ಮತದಾರರು ಸಿಗದಿದ್ದರೆ ಮಹಜರು ಸಿದ್ದಪಡಿಸಿ ವರದಿ ನೀಡಲಿದ್ದಾರೆ. ಮತದಾರರ ಪೈಕಿ ಅವರ ಮನೆಯ 18 ವರ್ಷ ವಯಸ್ಕರು ಸಹಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ುತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಮತದಾರರು ಹಾಗೂ ರಾಜಕೀಯ ಪಕ್ಷಗಳು ಅಧಿಕಾರಿಗಳು ಪರಸ್ಪರ ಸಹಕಾರ ನೀಡುವುದರೊಂದಿಗೆ ಸಮಗ್ರ ಪರಿಷ್ಕರಣೆ ಪ್ರಕ್ರಿಯೆನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ಪ್ರಸ್ತುತ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,823 ಮತಗಟ್ಟೆಗಳಿವೆ. ಪುರುಷ ಮತದಾರರು 7,69,931 ಹಾಗೂ 8,05,643 ಮಹಿಳಾ ಮತದಾರರು ಹಾಗೂ 148 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 1,57,522 ಮತದಾರರಿರುತ್ತಾರೆ. ಈ ಎಲ್ಲ ಮತಗಟ್ಟೆಗಳಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.