ಮಂಡ್ಯ ಪಿಇಟಿಯಲ್ಲಿ ತರಬೇತಿ ಪಡೆದು ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿ.ಟಿ.ಯು.) ತಂಡ. 
ಮಂಡ್ಯ

ಪಿಇಟಿಯಲ್ಲಿ ತರಬೇತಿ ಪಡೆದವರಿಗೆ ದ್ವಿತೀಯ ಸ್ಥಾನ: ದಕ್ಷಿಣ ವಲಯ ಅಂತರ ವಿವಿ ಕ್ರಿಕೆಟ್ ಪಂದ್ಯ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶ
  • ಗುಜರಾತಿನ ಸೌರಾಷ್ಟ್ರ ವಿಶ್ವವಿದ್ಯಾನಿಲಯದಲ್ಲಿ ಮುಂದಿನ ಪಂದ್ಯ
ಮಂಡ್ಯ: ಮೈಸೂರಿನ ಜೆಎಸ್‌ಎಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ನಡೆದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯಗಳ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು) ತಂಡ ಗೆಲುವು ಸಾಧಿಸುವ ಮೂಲಕ ವಿವಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶ ಪಡೆದಿದೆ. ಈ ತಂಡ ನಗರದ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾ ಸಮುಚ್ಚಯದಲ್ಲಿ ತರಬೇತಿ ಪಡೆದಿತ್ತು.
ಮೊದಲ ಪಂದ್ಯದಲ್ಲಿ ವಿಗ್ನಾನ್ ವಿಶ್ವವಿದ್ಯಾನಿಲಯ ವಿರುದ್ಧ 80 ರನ್ ಗುರಿಯನ್ನು 8.2 ಓವರ್‌ಗಳಲ್ಲಿ ಬೆನ್ನಟ್ಟಿಸಿ 8 ವಿಕೆಟ್‌ಗಳ ಜಯ ಸಾಧಿಸಿತು. ನಂತರ ಪುದುಚೇರಿ ತಾಂತ್ರಿಕ ವಿಶ್ವವಿದ್ಯಾನಿಲಯ ವಿರುದ್ಧ 7 ವಿಕೆಟ್, ಮಲ್ಲಾರೆಡ್ಡಿ ವಿಶ್ವವಿದ್ಯಾನಿಲಯ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯ ವಿರುದ್ಧ 44 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಮುಂದಿನ ಪಂದ್ಯದಲ್ಲಿ ಸಿಎಂಆರ್ ವಿಶ್ವವಿದ್ಯಾನಿಲಯ ವಿರುದ್ಧ 150 ರನ್ ಗುರಿಯನ್ನು ರೋಚಕವಾಗಿ ಬೆನ್ನಟ್ಟಿಸಿ 3 ವಿಕೆಟ್ ಜಯ ದಾಖಲಿಸಿತು. ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಜೆಪ್ಪಿಯಾರ್ ವಿಶ್ವವಿದ್ಯಾನಿಲಯ ವಿರುದ್ಧ 9 ವಿಕೆಟ್ ಜಯ ಸಾಧಿಸಿತು. ಸೆಮಿಫೈನಲ್‌ನಲ್ಲಿ ಅನ್ನಾ ವಿಶ್ವವಿದ್ಯಾನಿಲಯ ವಿರುದ್ಧ 6 ವಿಕೆಟ್‌ಗಳ ಗೆಲುವು ಪಡೆದು ಫೈನಲ್‌ಗೆ ಪ್ರವೇಶಿಸಿತು. ಅಂತಿಮ ಪಂದ್ಯದಲ್ಲಿ ವಿಟಿಯು ತಂಡವು ಒಸ್ಮಾನಿಯಾ ವಿಶ್ವವಿದ್ಯಾನಿಲಯ ವಿರುದ್ಧ ಹೋರಾಟಮಯ ಪ್ರದರ್ಶನ ನೀಡಿದರೂ, ರನ್ನರ್ಸ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ತಂಡದ ಈ ಪ್ರದರ್ಶನ ಅಧಿಕಾರಿಗಳು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.
ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ಪಿ.ಟಿ.ಕ್ರೀಡಾ ಸಮುಚ್ಚಯದಲ್ಲಿ ನಡೆದ ಉತ್ತಮ ಯೋಜಿತ ಆಯ್ಕೆ ಪ್ರಕ್ರಿಯೆ ಮತ್ತು ತೀವ್ರ ತರಬೇತಿ ಶಿಬಿರವು ತಂಡದ ದೈಹಿಕ ಸಾಮರ್ಥ್ಯ ಹಾಗೂ ಸ್ಪರ್ಧಾತ್ಮಕ ಸಿದ್ಧತೆಯನ್ನು ಬಲಪಡಿಸಿತು. ಇದರ ಫಲವಾಗಿ ಟೂರ್ನಿಯ ಪಯಣದಲ್ಲಿ ವಿಟಿಯು ತಂಡವು ಸರಣಿ ಗೆಲುವುಗಳ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಈ ಸಾಧನೆ ವಿಟಿಯು ಕ್ರೀಡಾ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿ ಗುರುತಿಸಲಾಗಿದೆ. ಈ ಸಾಧನೆಯ ಹಿನ್ನೆಲೆ ತಂಡವು ಈಗ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಂತರ್ ವಲಯ ಕ್ರಿಕೆಟ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದೆ. ಗುಜರಾತಿನ ಸೌರಾಷ್ಟ್ರ ವಿಶ್ವವಿದ್ಯಾನಿಲಯದಲ್ಲಿ ಫೆ.8ರಿಂದ 14ರವರೆಗೆ ನಡೆಯಲಿದೆ. ಈ ತಂಡಕ್ಕೆ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಶುಭ ಹಾರೈಸಿದ್ದಾರೆ.