ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ಶ್ರೀಮಠದ ಲಿಂಗೈಕ್ಯ ಸಿದ್ಧ್ದಲಿಂಗಸ್ವಾಮೀಜಿ ಹಾಗೂ ಕನಕಪುರ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮೀಜಿ ಬಾಗಿಯಾಗಿದ್ದರು. ಗ್ರಾಮದ ಯಜಮಾನರು ಮುಖಂಡರು ಇದ್ದರು.
- ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮೀಜಿ ಹೇಳಿಕೆ
ತಾಲೂಕಿನ ರಾಗಿ ಬೊಮ್ಮನಹಳ್ಳಿ ಗ್ರಾಮದ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ಶ್ರೀಮಠದ ಲಿಂಗೈಕ್ಯ ಶ್ರೀ ಸಿದ್ಧಲಿಂಗಸ್ವಾಮೀಜಿ ಹಾಗೂ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕನಕಪುರ ದೇಗುಲ ಮಠದ ಶ್ರೀ ಚನ್ನಬಸವಸ್ವಾಮೀಜಿ ವಹಿಸಿದ್ದರು. ಬೆಳಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜೆ ಹಾಗೂ ಅನ್ನದಾಸೋಹ ನಡೆಯಿತು. ನೂರಾರು ಭಕ್ತರು ಆಗಮಿಸಿ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಸ್ಮರಣಾ ಸಭೆಯಲ್ಲಿ ಮಾತನಾಡಿದ ಚನ್ನಬಸವಸ್ವಾಮೀಜಿ ಅವರು, ಲಿಂಗೈಕ್ಯ ಸಿದ್ಧಲಿಂಗಸ್ವಾಮೀಜಿ ಹಾಗೂ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರು ತಮ್ಮ ಜೀವನವನ್ನೇ ಸಮಾಜ ಸೇವೆ ಮತ್ತು ಧರ್ಮ ಪ್ರಚಾರಕ್ಕೆ ಮುಡಿಪಾಗಿಟ್ಟ ಮಹಾನ್ ಚೇತನಗಳು ಎಂದರು.
ನಡೆದಾಡುವ ದೇವರುಗಳಾಗಿ ಬಡವರ, ರೈತರ ಸಂಕಷ್ಟಕ್ಕೆ ಸ್ಪಂದಿಸಿದರು. ಶಿಕ್ಷಣ, ಅನ್ನದಾಸೋಹ ಮತ್ತು ಜನರಲ್ಲಿ ಜಾತ್ಯತೀತ ಭಾವನೆಯನ್ನು ಬೆಳೆಸಿದರು ಎಂದು ಸ್ಮರಿಸಿದರು.
ಈ ಇಬ್ಬರೂ ಮಹಾಸ್ವಾಮಿಗಳು ನಮಗೆ ನೀಡಿದ ಸಂದೇಶವೆಂದರೆ - ಮನುಷ್ಯನಾಗಿ ಹುಟ್ಟಿದ ಮೇಲೆ ಇನ್ನೊಬ್ಬರಿಗೆ ಸಹಾಯ ಮಾಡಬೇಕು. ದೇವಾಲಯ ಕೇವಲ ಪೂಜೆಗೆ ಮಾತ್ರ ಸೀಮಿತವಾಗಬಾರದು. ಅದು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಜಾಗೃತಿಯ ಕೇಂದ್ರವಾಗಬೇಕು. ಅವರ ಆದರ್ಶಗಳನ್ನು ಯುವಜನರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಗಿ ಬೊಮ್ಮನಹಳ್ಳಿ ಸುತ್ತೂರು ಶಾಖಾ ಮಠದ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಸಿದ್ಧಲಿಂಗಸ್ವಾಮೀಜಿ ಹಾಗೂ ನಿರ್ವಾಣ ಸ್ವಾಮೀಜಿ ಅವರು ನಡೆದಾಡುವ ದೇವರುಗಳಾಗಿ ಈ ಪ್ರದೇಶದ ಜನರ ಬದುಕನ್ನು ಬೆಳಗಿದವರು. ಬಡವರ ಮಕ್ಕಳಿಗೆ ಶಿಕ್ಷಣ, ಹಸಿದವರಿಗೆ ಅನ್ನ, ರೈತರಿಗೆ ಧೈರ್ಯ ತುಂಬಿದ ಮಹಾನ್ ಚೇತನಗಳಾಗಿದ್ದರು ಎಂದರು.
ಮಠ-ಮಂದಿರಗಳು ಕೇವಲ ಪೂಜಾ ಸ್ಥಳವಾಗಿ ಉಳಿಯದೆ, ಸಮಾಜದ ಸಮಸ್ಯೆಗೆ ಪರಿಹಾರ ನೀಡುವ ಕೇಂದ್ರವಾಗಬೇಕು. ಅವರು ತೋರಿಸಿದ ಜಾತ್ಯತೀತ, ಸೇವಾ ಮಾರ್ಗದಲ್ಲಿ ನಾವು ನಡೆಯಬೇಕು. ಯುವಜನರು ವ್ಯಸನಗಳಿಗೆ ಬಲಿಯಾಗದೆ, ಸ್ವಾಮೀಜಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗಲೇ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.
ವಿವಿಧ ಮಠಗಳ ಸ್ವಾಮೀಜಿಗಳು, ಗ್ರಾಮದ ಯಜಮಾನರು, ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.