ಮೆಣಸಗೆರೆ ಗ್ರಾಮದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕದಲೂರು ಉದಯ್ ಚಾಲನೆ ನೀಡಿದರು. ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಕದಲೂರು ರವಿ, ಮೆಣಸಗೆರೆ ಪ್ರಕಾಶ್ ಇತರರು ಇದ್ದರು. 
ಮಂಡ್ಯ

ಕೆಲ ಸಚಿವರಿಗೆ ಕೆಲಸ ಮಾಡಲು ಆಸಕ್ತಿಯೇ ಇಲ್ಲ

ಪ್ರಮುಖ ಮುಖ್ಯಾಂಶಗಳು

  • ministers
ಕೆ.ಎಂ.ದೊಡ್ಡಿ: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಕನಿಷ್ಠ ಐವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಹೈಕಮಾಂಡ್ ಬಳಿ ಮನವಿ ಮಾಡಿದ್ದೇವೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಸಮೀಪದ ಮೆಣಸಗೆರೆ ಗ್ರಾಮದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಚುರುಕಾಗಿ ಕೆಲಸ ಮಾಡದ ಸಚಿವರನ್ನು ಕೈಬಿಟ್ಟು ಆಡಳಿತ ಯಂತ್ರಕ್ಕೆ ವೇಗ ನೀಡುವ ದೃಷ್ಟಿಯಿಂದ ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಪ್ರಥಮ ಬಾರಿಗೆ ಆಯ್ಕೆಯಾಗಿರುವ ಶಾಸಕರು ಹೈಮಾಂಡ್‌ಗೆ ಪತ್ರ ಬರೆದಿರುವುದು ಸತ್ಯ. ಕೆಲ ಸಚಿವರಿಗೆ ಕೆಲಸ ಮಾಡಲು ಆಸಕ್ತಿಯೇ ಇಲ್ಲ. ಕೆಲವರು ಯಾವುದಾದರೂ ಕೋಟಾದ ಮೇಲೆ ಪ್ರತಿ ಬಾರಿಯೂ ಸಚಿವರಾಗುತ್ತಲೇ ಇರುತ್ತಾರೆ. ಅವರ ಕುರ್ಚಿ ಭದ್ರವಾಗಿದೆ. ಅದಕ್ಕಾಗಿ ಅವರಿಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ. ಇಂತಹವರನ್ನು ಬದಲಾಯಿಸಿ ಎಂಬುದಷ್ಟೇ ನಮ್ಮ ಬೇಡಿಕೆ ಎಂದು ಪ್ರತಿಕ್ರಿಯಿಸಿದರು.
ಮುಂಬರುವ ಬಜೆಟ್‌ನಲ್ಲಿ ಜಿಲ್ಲೆಯ ಹಾಗೂ ಮದ್ದೂರು ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಬಳಿ ಜಿಲ್ಲೆಯ ಶಾಸಕರು ಮನವಿ ಮಾಡಿದ್ದೇವೆ. ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.
ಶಾಸಕರು ವಿದೇಶ ಪ್ರವಾಸ ಕೈಗೊಳ್ಳವುದು ಅವರ ವೈಯಕ್ತಿಕ ವಿಚಾರ. ಹಾಗೆಯೇ ಮುಂದಿನ ದಿನಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೇರುವುದು ನಿಶ್ಚಿತ. ಪಕ್ಷದ ಹೈಕಮಾಂಡ್ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟರು.
ಮದ್ದೂರು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸಂಕಲ್ಪ ಕೈಗೊಂಡು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಕದಲೂರು ರವಿ, ಹಾಪ್‌ಕಾಮ್ಸ್ ನಿರ್ದೇಶಕ ಮೆಣಸಗೆರೆ ಪ್ರಕಾಶ್, ಮುಖಂಡರಾದ ಮರಿಸ್ವಾಮಿ, ಎಂ.ಆರ್. ಮಧುಸೂದನ್, ನಟರಾಜು, ರವಿ, ಎಂ.ಪಿ.ರಾಜು, ಮನು, ಕುಮಾರ, ನಂಜುಂಡಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.