ನಾಗಮಂಗಲದ ಕೃಷಿ ಭವನದ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಶ್ರೀನಿವಾಸ್, ಡಾ.ಅಶೋಕ್, ಸತೀಶ್ ಇತರರಿದ್ದರು. 
ಮಂಡ್ಯ

ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸಿ

ಲೋಕೇಶ್ ಮನು. ಡಿ

ನಾಗಮಂಗಲ:

ಕಂದಾಯ, ಪಂಚಾಯತ್ ರಾಜ್, ಸೆಸ್ಕ್, ಅರಣ್ಯ ಇಲಾಖೆ ಸೇರಿದಂತೆ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಕೃಷಿ ಭವನದ ಸಭಾಂಗಣದಲ್ಲಿ ಶನಿವಾರ ಸಚಿವ ಎನ್.ಚಲುವರಾಯಸ್ವಾಮಿ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿದರು. ಸಭೆಯಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್, ಶಿಕ್ಷಣ, ಸೆಸ್ಕ್, ಪುರಸಭೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಆಗಬೇಕಿದ್ದ ಕೆಲಸಗಳ ಕುರಿತು ಜನರು ಸಚಿವರ ಬಳಿ ಹೇಳಿಕೊಂಡರು.
ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದ ಸಚಿವರು, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರೆ ಮತ್ತೆ ಕೆಲವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಇತ್ಯರ್ಥಪಡಿಸುವಂತೆ ಸೂಚಿಸಿದರು. ಸಭೆಯಲ್ಲಿ ಹೆಚ್ಚು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಕೇಳಿಬಂದವು.
ಹೇಮಾವತಿ ನಾಲಾ ರಸ್ತೆ ದುರಸ್ತಿ, ಪೌತಿಖಾತೆ ಆಗುತ್ತಿಲ್ಲ, ಎಸಿ ಕೋರ್ಟ್‌ನಲ್ಲಿ ಕೆಲವು ಪ್ರಕರಣಗಳ ಬಗ್ಗೆ, ವಿದ್ಯುತ್ ಕಂಬ ಸ್ಥಳಾಂತರ, ವಿದ್ಯಾಭ್ಯಾಸಕ್ಕೆ ಕಾಲೇಜಿನಲ್ಲಿ ಸೀಟ್ ಕೊಡಿಸಿಕೊಡಿ, ಕಾಮಗಾರಿ ಮುಗಿದಿದ್ದರೂ ಬಿಲ್ ಪಾವತಿಮಾಡುತ್ತಿಲ್ಲ, ಜಮೀನು ಸರ್ವೇ ವಿಳಂಬ, ಅರಣ್ಯ ಇಲಾಖೆ ಎನ್‌ಒಸಿ ನೀಡುತ್ತಿಲ್ಲ ಎಂಬಿತ್ಯಾದಿ ಸಮಸ್ಯೆಗಳನ್ನು ಜನರು ಸಚಿವರ ಬಳಿ ಹೇಳಿಕೊಂಡರು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆಗಳ ಅರ್ಜಿಗಳನ್ನು ಹಸ್ತಾಂತರಿಸಿ ಮುಂದಿನ ಸಭೆಗೆ ಈ ಸಮಸ್ಯೆಗಳ ಸ್ಟೇಟಸ್ ಏನೆಂಬುದನ್ನು ತಿಳಿಸಬೇಕು ಎಂದು ಸೂಚಿಸಿದರು.
ಒಂದು ಸಭೆಯಲ್ಲಿ ಬಂದಂತಹ ಸಮಸ್ಯೆ ಆ ತಿಂಗಳ ಅಂತ್ಯದೊಳಗೆ ಇತ್ಯರ್ಥವಾಗಬೇಕು ಅಥವಾ ಇತ್ಯರ್ಥಪಡಿಸುವ ಹಂತಕ್ಕೆ ಹೋಗಿರಬೇಕು. ಒಂದು ಬಾರಿ ಬಂದಂತಹ ಸಮಸ್ಯೆ ಮತ್ತೆ ಮುಂದಿನ ತಿಂಗಳು ಅದೇ ಸಮಸ್ಯೆಗೆ ಸ್ಪಂದಿಸಿಲ್ಲವೆಂಬ ದೂರು ಕೇಳಿಬಂದರೆ ಅಂತಹ ಅಧಿಕಾರಿ ವಿರುದ್ಧ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನಸಂಪರ್ಕ ಸಭೆಯಲ್ಲಿ ಬಂದಂತಹ ಎಲ್ಲ ಸಮಸ್ಯೆಗಳನ್ನು ಪರಾಮರ್ಶಿಸಿ ಕಾನೂನಾತ್ಮಕವಾಗಿ ಇತ್ಯರ್ಥಪಡಿಸಿ. ಕಾನೂನಿಗೆ ವಿರುದ್ಧವಾಗಿದ್ದರೆ ಅಂತಹ ಸಮಸ್ಯೆಗಳ ಬಗ್ಗೆ ಅರ್ಜಿದಾರರಿಗೆ ಅರಿವು ಮೂಡಿಸಿ. ಆದಾಗ್ಯೂ ಅರ್ಜಿದಾರ ಸಮಾಧಾನವಾಗದಿದ್ದರೆ ನನ್ನ ಗಮನಕ್ಕೆ ತಂದರೆ ನಾನು ಅರ್ಜಿದಾರನಿಗೆ ಮನವರಿಕೆ ಮಾಡಿಕೊಡುತ್ತೇನೆ. ನನ್ನ ಮುಖಂಡರೇ ಆಗಿರಲಿ ಅಥವಾ ಸಮಸ್ಯೆಯ ನಿಜಾಂಶ ಗೊತ್ತಿರದೆ ಸಮಸ್ಯೆ ಬಂದಾಗ ಇತ್ಯರ್ಥಪಡಿಸಲು ನಾನೇ ಸೂಚಿಸಿದ್ದರೂ ಕೂಡ ಅದು ಕಾನೂನುಬಾಹಿರವಾಗಿದ್ದರೆ ಅಂತಹ ಕೆಲಸವನ್ನು ಮಾಡಬೇಡಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಡಾ.ಅಶೋಕ್, ತಾ.ಪಂ.ಇಒ ಸತೀಶ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಎಸಿಎಫ್ ಪ್ರಶಾಂತ್ ಸೇರಿದಂತೆ ಮತ್ತಿತರರಿದ್ದರು.