ನಾಗಮಂಗಲ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೂಡ್ಲೀಗೌಡ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಗ್ಯಾರಂಟಿ ಯೋಜನೆಯಲ್ಲಿ ಸಮಸ್ಯೆಗಳಿದ್ದರೆ ಪರಿಹಾರ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಹೋಬಳಿವಾರು ಕುಂದುಕೊರತೆ ಸಭೆ
  • ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೂಡ್ಲೀಗೌಡ ಹೇಳಿಕೆ
  • ನಾಗಮಂಗಲದಲ್ಲಿ ಪ್ರಗತಿ ಪರಿಶೀಲನಾ ಸಭೆ
ನಾಗಮಂಗಲ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧಿಸಿದಂತೆ ತಾಲೂಕಿನಲ್ಲಿ ಹೋಬಳಿವಾರು ಕುಂದುಕೊರತೆ ಸಭೆಯನ್ನು ನಡೆಸುವ ಮೂಲಕ ಸಮಸ್ಯೆಗಳಿದ್ದಲ್ಲಿ ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮೂಡ್ಲೀಗೌಡ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಕಡುಬಡವರ ಬಿಪಿಎಲ್ ಕಾರ್ಡ್‌ಗಳೂ ರದ್ದಾಗಿವೆ. ಕೆಲವರಿಗೆ ತಾಂತ್ರಿಕ ದೋಷಗಳಿಂದ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿಲ್ಲ. ಕೆಲವೆಡೆ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ನೀಡುತ್ತಿಲ್ಲವೆಂಬ ದೂರುಗಳಿವೆ. ಆದ್ದರಿಂದ ಪ್ರತಿ ಹೋಬಳಿವಾರು ಬಿಪಿಎಲ್ ಕಾರ್ಡ್ ರದ್ದಾಗಿರುವವರು ಹಾಗೂ ಗೃಹಲಕ್ಷ್ಮಿ ಹಣ ಬರುತ್ತಿಲ್ಲವೆನ್ನುವಂತಹವರನ್ನು ಪಟ್ಟಿ ಮಾಡಿ ಅವರ ದಾಖಲೆಗಳನ್ನು ಪಡೆದು ಸತ್ಯಾಸತ್ಯತೆಯ ವರದಿಯನ್ನು ರಾಜ್ಯ ಸಮಿತಿಗೆ ಕಳುಹಿಸುವ ಕೆಲಸ ಮಾಡಲಾಗುವುದು. ಕೆಲವೆಡೆ ಬಸ್‌ಗಳು ನಿಲುಗಡೆ ನೀಡುತ್ತಿಲ್ಲವೆನ್ನುವ ದೂರುಗಳಿದ್ದು ಅವುಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರ ಸಂಖ್ಯೆ aಹೆಚ್ಚಾಗಿದೆ. ಆದರೆ ಪ್ರತಿಪಕ್ಷದವರು ಉಚಿತ ಪ್ರಯಾಣ ಆರಂಭಿಸಿ ಬಸ್‌ಗಳ ಸಂಖ್ಯೆ ಕಡಿಮೆ ಮಾಡಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಶಕ್ತಿ ಯೋಜನೆ ಜಾರಿಗಿಂತ ಮೊದಲಿದ್ದ ಬಸ್‌ಗಳ ಸಂಖ್ಯೆಗಳಿಗಿಂತ ಈಗ ಹೆಚ್ಚು ಬಸ್‌ಗಳನ್ನು ಬಿಡಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಬಸ್‌ಗಳ ಅಭಾವ ಎಂಬುದು ಕಾಣುತ್ತಿದೆ. ಕಳೆದ ಒಂದು ತಿಂಗಳಿನಲ್ಲಿ ತಾಲೂಕಿನಲ್ಲಿ 79 ಜನ ಹೊಸದಾಗಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ನಮ್ಮ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಅಧಿಕಾರದಲ್ಲಿರುವವರೆಗೂ ಚಾಲ್ತಿಯಲ್ಲಿರಲಿವೆ ಎಂದರು.
ಸದಸ್ಯೆಗೆ ಸಿಕ್ಕ ಬಿಪಿಎಲ್ ಕಾರ್ಡ್:
ಕಳೆದ ನ.25 ರಂದು ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಗೀತಾ ಅವರು ನಮ್ಮ ಕುಟುಂಬದ ಹೆಸರಿನಲ್ಲಿ ಒಂದು ಗುಂಟೆ ಜಮೀನು ಇಲ್ಲ, ಯಾವ ಉದ್ಯೋಗದಲ್ಲಿಯೂ ಇಲ್ಲ, ಟ್ರ್ಯಾಕ್ಟರ್ ಖರೀದಿಸಲು ಲೋನ್ ಪಡೆಯಲು ಆದಾಯ ತೆರಿಗೆ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದರಿಂದ ನೋಂದಣಿ ಮಾಡಿದ್ದ ಒಂದೇ ಕಾರಣಕ್ಕೆ ನಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಅಳಲು ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ವಿಜಯವಾಣಿ ಪತ್ರಿಕೆ ಅರ್ಹತೆ ಇದ್ದರೂ ಬಿಪಿಎಲ್ ಕಾರ್ಡ್ ರದ್ದು ಎಂದು ಸುದ್ದಿ ಪ್ರಕಟಿಸಿತ್ತು. ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಂಪೂರ್ಣ ಮಾಹಿತಿ ಪಡೆದ ಆಹಾರ ಇಲಾಖೆ, ಸದಸ್ಯೆಯ ಬಿಪಿಎಲ್ ಕಾರ್ಡ್ ಸೇರಿದಂತೆ ತಾಲೂಕಿನಲ್ಲಿ ಅದೇ ರೀತಿಯಲ್ಲಿ ರದ್ದಾಗಿದ್ದ 17 ಬಿಪಿಎಲ್ ಕಾರ್ಡ್‌ದಾರರಿಗೆ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಿದೆ.
ಸಭೆಯಲ್ಲಿ ತಾ.ಪಂ.ಇಒ ಸತೀಶ್, ಸಮಿತಿ ಸದಸ್ಯರಾದ ವಿನಯ್, ಶರತ್‌ರಾಮಣ್ಣ, ದಿನೇಶ್, ನೀಲಾ, ಗೀತಾ ಇತರರು ಇದ್ದರು.