ಮಂಡ್ಯ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾರ್ಯಾಗಾರವನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಉದ್ಘಾಟಿಸಿದರು.
- ನಗರದಲ್ಲಿ ತರಬೇತಿ ಕಾರ್ಯಾಗಾರ
- ಜಿಲ್ಲಾ ಪಂಚಾಯಿತಿಯಿಂದ ಆಯೋಜನೆ
ಮಂಡ್ಯ: ಮನೆ ಹಂತದಲ್ಲಿಯೇ ಹಸಿ, ಒಣ, ಸ್ಯಾನಿಟರಿ ಮತ್ತು ವಿಶೇಷ ಕಾಳಜಿ ತ್ಯಾಜ್ಯಗಳೆಂದು ನಾಲ್ಕು ವಿಧಗಳಾಗಿ ವಿಂಗಡಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಮೂಲಕ ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಪಂನಿಂದ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಸಿ ತ್ಯಾಜ್ಯವನ್ನು ಮನೆ ಹಂತದಲ್ಲಿ ಕಾಂಪೋಸ್ಟಿಂಗ್ ಪದ್ಧತಿಯಲ್ಲಿ ನಿರ್ವಹಣೆ ಮಾಡಲು ಗ್ರಾಪಂಗಳು ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮ ವಹಿಸಬೇಕು. ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಗದಿತ ಕಾಲಮಿತಿಯ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳುವಂತೆ ಗ್ರಾಪಂ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳಿಗೆ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯಿತಿಯ ಒಟ್ಟು ನಿಧಿಯಲ್ಲಿ ಕನಿಷ್ಟ ಶೇ.30ರಷ್ಟನ್ನು ಘನ ತ್ಯಾಜ್ಯ ನಿರ್ವಹಣೆಗೆ ಮೀಸಲಿಡಲು ಯೋಜನೆ ರೂಪಿಸಬೇಕು. ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಗಾಗಿ ಸ್ವ-ಸಹಾಯ ಸಂಘಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಗ್ರಾಪಂ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣಾ ನಿಯಮಗಳ-2026ರ ಅನುಷ್ಠಾನಕ್ಕಾಗಿ ವಿಶೇಷ ಸೂತ್ರ ಪಾಲಿಸಬೇಕು. ಅಂತೆಯೇ ಪ್ಲಾಸ್ಟಿಕ್ ನಿರ್ವಹಣೆಗಾಗಿ ಮತ್ತು ಬೂದು ನೀರು ನಿರ್ವಹಣೆಗಾಗಿ ಸೂತ್ರವನ್ನು ಅನುಸರಿಸಬೇಕು. ಪಾರಂಪರಿಕ ತ್ಯಾಜ್ಯದ ರಾಶಿಗೆ ತ್ಯಾಜ್ಯ ಹಾಕುವುದನ್ನು ನಿಷೇಧಿಸಬೇಕು ಎಂದು ತಿಳಿಸಿದರು.
ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಕಸ ಸುರಿಯುವ ಸೂಕ್ಷ್ಮ ಪ್ರದೇಶ ಗುರುತಿಸಿ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳು, ಸ್ಥಳೀಯರು, ಪರಿಸರ ಪ್ರೇಮಿಗಳು, ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಿ ಸುಂದರೀಕರಣಗೊಳಿಸಲು ಕ್ರಮ ವಹಿಸಬೇಕು. ಆ ಸ್ಥಳದಲ್ಲಿ ಸಸಿ ನೆಡುವುದು, ಸಿ.ಸಿ ಕ್ಯಾಮೆರಾ ಮತ್ತು ನೋಟೀಸ್ ಬೋರ್ಡ್ ಅಳವಡಿಸಿ, ಅರಿವು ಮೂಡಿಸಲು ಕ್ರಮ ವಹಿಸಬೇಕು. ಅಂತಹ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸ್ಥಳೀಯರು ಅಥವಾ ಸಂಘ ಸಂಸ್ಥೆಗಳಿಗೆ ಹೊಣೆಗಾರಿಕೆ ವಹಿಸುವಂತೆ ಸಲಹೆ ನೀಡಿದರು.
ಒಂದು ವೇಳೆ ಯಾವುದೇ ವ್ಯಕ್ತಿ/ಸಂಘ ಸಂಸ್ಥೆಗಳು ಘನ ತ್ಯಾಜ್ಯ ನಿರ್ವಹಣಾ ನಿಯಮಗಳ-2026ರ ಸೂಚನೆಗಳನ್ನು ಪಾಲಿಸದೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಿದಲ್ಲಿ ಅಂತಹವರ ವಿರುದ್ಧ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನುಸಾರ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ ಸಿಇಒ, ಘನ ತ್ಯಾಜ್ಯ ನಿರ್ವಹಣಾ ನಿಯಮಗಳ-2026ರ ಅನ್ವಯ ಪ್ರತಿ ದಿನ 100 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚಿನ ತ್ಯಾಜ್ಯ ಉತ್ಪಾದನೆ ಮಾಡುವ ಅಥವಾ 20000 ಚ.ಮಿ ಅಥವಾ ಹೆಚ್ಚಿನ ಕಟ್ಟಡ ಹೊಂದಿರುವ ಅಥವಾ 40000 ಲೀ. ನೀರು ಬಳಕೆ ಮಾಡುವವರನ್ನು ಬೃಹತ್ ತ್ಯಾಜ್ಯ ಉತ್ಪಾದರೆಂದು ಗುರುತಿಸಿ, ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಿ, ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿರುವ ಮೂರು ಮಲ ತ್ಯಾಜ್ಯ ನಿರ್ವಹಣಾ ಘಟಕಗಳು ಅಂದರೆ ಕೆ.ಆರ್.ಪೇಟೆ ತಾಲೂಕು ಹಿರಿಕಳಲೆ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲೂಕು ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯಿತಿ, ಮಳವಳ್ಳಿ ತಾಲೂಕು ಬಿ.ಜಿ.ಪುರ ಗ್ರಾಮ ಪಂಚಾಯಿತಿಯ ಜೂನ್ ಮಾಹೆಯ ಅಂತ್ಯದೊಳಗೆ ಕಾರ್ಯಾರಂಭಗೊಳ್ಳಲಿದೆ. ಸಮರ್ಪಕ ನಿರ್ವಹಣೆಗೆ ಕ್ರಮ ವಹಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಒಗಳಿಗೆ ಸೂಚನೆ ನೀಡಿದ ಅವರು, ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮ ಪಂಚಾಯಿತಿ ಕಾಮಗಾರಿಯು ಪ್ರಗತಿಯಲ್ಲಿದೆ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ಮಾಣ ಕೆ.ಆರ್.ಪೇಟೆ ತಾಲೂಕು ಚೌಡೇನಹಳ್ಳಿ ಗ್ರಾಮ ಪಂಚಾಯಿತಿ, ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮ ಪಂಚಾಯಿತಿ, ನಾಗಮಂಗಲ ತಾಲೂಕು ಹುಲಿಕೆರೆ ಗ್ರಾಮ ಪಂಚಾಯಿತಿ ಮತ್ತು ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ವಚ್ಛ ಸಂಕೀರ್ಣ ಘಟಕ, ಅಗತ್ಯ ಯಂತ್ರೋಪಕರಣಗಳನ್ನು ಅಳವಡಿಸಿ ಉನ್ನತೀಕರಿಸಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡಲಾಗಿದ್ದು, ಜೂನ್ ಮಾಹೆಯೊಳಗೆ ಕಾರ್ಯಾರಂಭಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಗಳ ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಸರಬರಾಜು ಮಾಡಿದ ನಂತರ ತ್ಯಾಜ್ಯವನ್ನು ವಿಂಗಡಣೆ ಮಾಡಿ. ನಂತರ ಬೇಲಿಂಗ್ ಮಾಡಿ, ಸಿಮೆಂಟ್ ಕಾರ್ಖಾನೆಗಳಿಗೆ ಮಾರಾಟ ಮಾಡುವ ಮೂಲಕ ತ್ಯಾಜ್ಯದಿಂದ ಸಂಪತ್ತು ಪರಿಕಲ್ಪನೆಯನ್ನು ಹೊಂದಲಾಗಿದೆ. ಮದ್ದೂರು ಮತ್ತು ಮಳವಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮದ್ದೂರು ತಾಲೂಕು ಕದಲೂರು ಗ್ರಾಮ ಪಂಚಾಯಿತಿಯ ಹೊಸಹಳ್ಳಿ ಗ್ರಾಮದಲ್ಲಿ ಸ್ಥಾಪನೆಗೆ ನಿರ್ವಹಣೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ಉಪ ಕಾರ್ಯದರ್ಶಿ(ಆಡಳಿತ) ಡಾ.ಶಿವಲಿಂಗಯ್ಯ, ಯೋಜನಾ ನಿರ್ದೇಶಕ ಸುಂದರ್‌ರಾಜ್, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಇಎಂಪಿಆರ್‌ಐ ಬೆಂಗಳೂರು ಸಂಸ್ಥೆ ನಿರ್ದೇಶಕ ಟಿ.ಮಹೇಶ್, ವೆಸ್ಟ್ ಇಂಪ್ಯಾಕ್ಟ್ ಟ್ರಸ್ಟ್‌ನ ಗಾಯಿತ್ರಿ, ಎಸ್‌ಎಎಎಚ್‌ಎಎಸ್ ಸಂಸ್ಥೆಯ ಜಾರ್ಜ್ ಅಲೆಗ್ಸಾಂಡರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಂಜುನಾಥ್ ಇತರರಿದ್ದರು.