ಪಾಂಡವಪುರ ತಾಲೂಕಿನ ಕನಗನಹಳ್ಳಿಯಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು. ಬಸವರಡ್ಡಪ್ಪ ರೋಣದ ಇತರರು ಇದ್ದರು. 
ಮಂಡ್ಯ

ವಿರೋದದ ನಡುವೆಯೂ ಸೋಲಾರ್ ಪ್ಲಾೃಂಟ್ ನಿರ್ಮಾಣ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ
ಪಾಂಡವಪುರ: ತಾಲೂಕಿನ ಚಿನಕುರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಗನಹಳ್ಳಿ ಗ್ರಾಮದಲ್ಲಿ 4.5 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಸೋಲಾರ್ ಪ್ಲಾೃಂಟ್ ಅಳವಡಿಕೆ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ವಿರೋಧ ಮತ್ತು ಪ್ರತಿಭಟನೆ ನಡುವೆಯೂ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿ, ರೈತರ ಅನುಕೂಲಕ್ಕಾಗಿ ಸೋಲಾರ್ ಪ್ಲಾೃಂಟ್  ಅಳವಡಿಸಲಾಗುತ್ತಿದ್ದು, ಇದರಿಂದ ರೈತರಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್ ಲಭ್ಯವಾಗುವ ಪರಿಣಾಮ ರಾತ್ರಿ ವೇಳೆಯಲ್ಲಿ ಜಮೀನುಗಳಿಗೆ ನೀರು ಹಾಯಿಸುವುದು ತಪ್ಪುತ್ತದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೇಲುಕೋಟೆ, ಚಿನಕುರಳಿ ಮತ್ತು ದುದ್ದ ಹೋಬಳಿಗಳಿಗೆ ಯೋಜನೆ ಮಂಜೂರಾಗಿದ್ದು, ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಯ ಅನುಷ್ಠಾನಕ್ಕಾಗಿ ಅನುದಾನ ಒದಗಿಸಿದೆ ಎಂದು ತಿಳಿಸಿದರು.
ಯೋಜನೆಗೆ ನಿಗದಿಯಾಗಿರುವ ಸ್ಥಳದಲ್ಲೇ ಪ್ಲಾೃಂಟ್ ಅಳಡಿಸಬೇಕು ಎಂದು ಕೆಲವರು ಒತ್ತಾಯಿಸಿ ಸಹಿ ಸಂಗ್ರಹಿಸಿದ್ದಾರೆ. ಆದರೆ ಮತ್ತೊಂದು ವರ್ಗ ಈ ಸ್ಥಳದಲ್ಲಿ ಬೇಡ ಎಂದು ವಾದಿಸುತ್ತಿದ್ದಾರೆ. ಇಲ್ಲಿ ದಬ್ಬಾಳಿಕೆಯಿಂದ ಭೂಮಿ ಪೂಜೆ ನೆರವೇರಿಸಲು ಬಂದಿಲ್ಲ. ಯೋಜನೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಬಂದು ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಪ್ಲಾೃಂಟ್ ಅಳವಡಿಕೆಯ ಜವಾಬ್ದಾರಿ ಹೊತ್ತಿರುವ ಖಾಸಗಿ ಸಂಸ್ಥೆ ಮತ್ತು ಸರ್ಕಾರಿ ಅಧಿಕಾರಿಗಳು ಯೋಜನೆಗೆ ಅಗತ್ಯವಿರುವ ಸೂಕ್ತ ಜಮೀನನ್ನು ಗುರುತಿಸಿದ ಬಳಿಕ ಕಂದಾಯ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಯೋಜನೆ ವಿರೋಧಿಸುವವರ ಸಭೆ ಕರೆದು ಮನವೊಲಿಸಲಾಗುವುದು. ಯೋಜನೆಯ ಪರವಾಗಿರುವ ಮತ್ತು ವಿರೋಧ ಮಾಡುತ್ತಿರುವ ಇಬ್ಬರಿಗೂ ನ್ಯಾಯ ದೊರಕಿಸಕೊಡಬೇಕಿದೆ. ಹೀಗಾಗಿ ಯೋಜನೆಗೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಜೆಡಿಎಸ್ ಮುಖಂಡರ ಪ್ರತಿಭಟನೆ
ಜೆಡಿಎಸ್ ಮುಖಂಡ, ಮನ್‌ಮುಲ್ ನಿರ್ದೇಶಕ ಶಿವಕುಮಾರ್ ಮಾತನಾಡಿ, ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ಯೋಜನೆಗೆ ನಿಗದಿಯಾಗಿರುವ ಸ್ಥಳ ಗೋಮಾಳವಾಗಿದ್ದು, ಈ ಸ್ಥಳದಲ್ಲಿ ಯೋಜನೆ ಪ್ರಾರಂಭಿಸಿದರೆ ರೈತರಿಗೆ ಅನಾನುಕೂಲವಾಗಲಿದೆ. ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಗೋಮಾಳ ಮೀಸಲಾಗಿರಬೇಕು ಎಂದು ಸರ್ಕಾರದ ಆದೇಶವೇ ಇದೆ. ನಿಗಧಿತ ಸ್ಥಳ ಸೂಕ್ತವಲ್ಲ ಎಂದು ಸ್ಥಳೀಯರು ದೂರು ನೀಡಿರುವ ಹಿನ್ನೆಲೆಯಲ್ಲಿ ಸೋಲಾರ್ ಪ್ಲಾಂಟ್ ಯೋಜನೆಗೆ ನಿಗದಿಯಾಗಿರುವ  ಸ್ಥಳವನ್ನು ಬೇರೆಡೆಗೆ ವರ್ಗಾಯಿಸುವಂತೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂಬಂಧ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಜಾಗ ಆಯ್ಕೆ ಮಾಡುವಂತೆ ಕೋರಿಕೊಳ್ಳಲಾಗಿದೆ. ಹೀಗಾಗಿ ಕಾಮಗಾರಿಗೆ ಪೂಜೆ ಸಲ್ಲಿಸಬಾರದು ಎಂದು ಆಗ್ರಹಿಸಿದರು.
 .
ವಿರೋಧದ ನಡುವೆ ಭೂಮಿಪೂಜೆ 
ಜೆಡಿಎಸ್ ಮುಖಂಡರ ವಿರೋಧದ ನಡುವೆಯೂ ಯೋಜನೆಗೆ ಅಗತ್ಯವಿರುವ ದಾಖಲೆಗಳು ಕಾನೂನುಬದ್ಧವಾಗಿದ್ದು, ಕಾಮಗಾರಿಗೆ ಪೂಜೆ ಸಲ್ಲಿಸುತ್ತೇನೆ. ಆನಂತರದಲ್ಲಿ ಬೇಕಾದರೆ ವಿರೋಧ ಮಾಡುವವರ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಮಗಾರಿಗೆ ಭೂಮಿ ನೆರವೇರಿಸಿದ್ದರು. ಭೂಮಿ ಪೂಜೆ ವಿರೋಧಿಸಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ರಾಮಕೃಷ್ಣೇಗೌಡ, ಸಿ.ಎ.ಲೋಕೇಶ್ ಇತರರು ಇದ್ದರು.
ಈ ವೇಳೆ ತಹಸೀಲ್ದಾರ್ ಬಸವರಡ್ಡಪ್ಪ ರೋಣದ, ಪೊಲೀಸ್ ಇನ್ಸ್‌ಪೆಕ್ಟರ್ ಶರತ್‌ಕುಮಾರ್, ಸಬ್ ಇನ್ಸ್‌ಪೆಕ್ಟರ್ ಉಮೇಶ್ ಇತರರು ಇದ್ದರು.