ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದ ಚಿಕ್ಕಮ್ಮ ದೊಡ್ಡಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘವನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಬಿ.ಕೆಂಪರಾಜು, ಬಿ.ಎಸ್.ಗಿರೀಶ್, ವೆಂಕಟೇಶ್, ಶಿವಕುಮಾರ್, ಲೋಕೇಶ್ ಇತರರು ಇದ್ದರು. 
ಮಂಡ್ಯ

ಒಗ್ಗೂಡಿ ಕೆಲಸ ಮಾಡಿದಾಗ ಸಮಾಜಕ್ಕೆ ಒಳಿತು

ಲೋಕೇಶ್ ಮನು. ಡಿ
ಮದ್ದೂರು: ಸವಿತಾ ಸಮಾಜವು ಕ್ಷೌರಿಕ ವೃತ್ತಿ, ಮಂಗಳವಾದ್ಯ ಮತ್ತು ಆಯುರ್ವೇದ ವೈದ್ಯಕೀಯ ಪರಂಪರೆಯನ್ನು ಹೊಂದಿರುವ ಭಾರತದ ಪ್ರಮುಖ ಸಾಂಸ್ಕೃತಿಕ ಸಮುದಾಯವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಬೆಸಗರಹಳ್ಳಿ ಗ್ರಾಮದ ಚಿಕ್ಕಮ್ಮ ದೊಡ್ಡಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು, ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಸಮಾಜದ ಅಭಿವೃದ್ಧಿಗಾಗಿ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜತೆಗೆ ಆರ್ಥಿಕವಾಗಿ ಸದೃಢರಾಗಬೇಕು. ಸಂಘದ ಮೂಲಕ ಜನಾಂಗದ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ರೂಪಿಸಬೇಕು ಮತ್ತು ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲರೂ ಒಗ್ಗೂಟ್ಟಿನಿಂದ ಕೆಲಸ ಮಾಡಿದಾಗ ಸಮಾಜಕ್ಕೆ ಒಳ್ಳೆಯದಾಗಲಿದೆ ಎಂದರು.
ಸವಿತಾ ಸಮಾಜಕ್ಕೆ ತಾಲೂಕು ಕೇಂದ್ರದಲ್ಲಿ ಭವನ ನಿರ್ಮಾಣ ಮಾಡಲು ನಿವೇಶನ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವ ಜತೆಗೆ ನಿಮ್ಮ ಸಮುದಾಯ ಜತೆ ಸದಾ ಇರುತ್ತೇನೆಂದು ಭರವಸೆ ನೀಡಿದರು.
ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ.ಕೆಂಪರಾಜು, ಬೆಸಗರಹಳ್ಳಿ ಘಟಕದ ಅಧ್ಯಕ್ಷ ಬಿ.ಎಸ್.ಗಿರೀಶ್, ಗೌರವಾಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಶಿವಕುಮಾರ್, ಖಜಾಂಚಿ ಎ.ಎಸ್.ತೇಜಸ್, ಕಾರ್ಯಾಧ್ಯಕ್ಷ ಬಿ.ಪಿ.ರವಿ, ಸಂಚಾಲಕ ರೇಣುಕಪ್ರಸಾದ್, ಸಹ ಕಾರ್ಯದರ್ಶಿ ಎನ್.ರಾಜೇಂದ್ರ, ಸಂಘಟನಾ ಕಾರ್ಯದರ್ಶಿ ಸಿ.ಕೆ.ಕಿರಣ ಹಾಗೂ ಜಂಟಿ ಕಾರ್ಯದರ್ಶಿ ಕುಮಾರ್, ಒಬಿಸಿ ಸಂಘಟನೆ ಅಧ್ಯಕ್ಷ ಲೋಕೇಶ್ ಸೇರಿದಂತೆ ಇತರರು ಇದ್ದರು.