ಮದ್ದೂರು: ಉರಗಳು ಭೂಮಿಯ ಮೇಲಿನ ಪ್ರಮುಖ ಜೀವಿಗಳಲ್ಲಿ ಒಂದಾಗಿದ್ದು, ಪರಿಸರ ಸಮತೋಲನ ಪಾಲನೆಗೆ ಮತ್ತು ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿವೆ ಎಂದು ಉರಗ ತಜ್ಞ ಮ.ನ. ಪ್ರಸನ್ನ ಕುಮಾರ್ ಹೇಳಿದರು. ನಗರದ ಎಚ್. ಕೆ. ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಉರಗ ಪ್ರಾತಕ್ಷಿಕೆ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಹಾವುಗಳನ್ನು ಪ್ರದರ್ಶಿಸಿ ಮಾತನಾಡಿದರು.
ವಿಶ್ವದಲ್ಲಿ ಸಾವಿರಾರು ಜಾತಿಯ ಹಾವುಗಳಿವೆ. ಹೆಚ್ಚಿನ ಹಾವುಗಳು ವಿಷಕಾರಿಯಲ್ಲ ಎಂದ ಅವರು ಮನುಷ್ಯರಂತೆ ಹಾವುಗಳು ಭೂಮಿಯ ಮೇಲೆ ಬದುಕುವ ಹಕ್ಕನ್ನು ಹೊಂದಿವೆ. ವಿದ್ಯಾರ್ಥಿಗಳು ಅವುಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಿಕೊಳ್ಳುವ ಮೂಲಕ ಹಾವುಗಳ ಸಂರಕ್ಷಣೆಗೆ ಗಮನಹರಿಸಬೇಕು ಎಂದರು.
ಉರಗಗಳನ್ನು ರೈತನ ಮಿತ್ರ ಎಂದು ಕರೆದರೂ ಅವುಗಳ ಬಗ್ಗೆ ಜನರಲ್ಲಿ ಅಪಾರವಾದ ಮೂಢನಂಬಿಕೆಗಳಿವೆ. ಅದರಿಂದ ಹೊರ ಬರಬೇಕು. ಅವುಗಳು ಮಾನವರ ಮೇಲೆ ಅನಗತ್ಯವಾಗಿ ದಾಳಿ ಮಾಡುವುದಿಲ್ಲ ಬದಲಾಗಿ ತಮಗೆ ಅಪಾಯ ಎದುರಾದಾಗ ಮಾತ್ರ ಬೇರೆ ಪ್ರಾಣಿಗಳಂತೆ ತಮ್ಮ ರಕ್ಷಣೆಗಾಗಿ ದಾಳಿ ಮಾಡುತ್ತವೆ ಎಂದು ಮ.ನ. ಪ್ರಸನ್ನ ಕುಮಾರ್ ಹೇಳಿದರು.
ನಗರೀಕರಣ, ಕೈಗಾರಿಕರಣ ಮತ್ತು ಪರಿಸರ ನಾಶದಿಂದಾಗಿ ಹಾವುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕ ಕಾರಿ ಸಂಗತಿ ಎಂದರು. ಹಾವುಗಳು ಆಹಾರ ಮತ್ತು ಆಶ್ರಯ ಹುಡುಕುತ್ತಾ ಜನ ವಸತಿ ಪ್ರದೇಶಗಳಿಗೆ ಬರುತ್ತಿವೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ಕೊಲ್ಲದೆ ಅರಣ್ಯ ಇಲಾಖೆ ಅಥವಾ ಉರಗ ರಕ್ಷಕರಿಗೆ ಮಾಹಿತಿ ನೀಡುವ ಮೂಲಕ ಅವುಗಳ ರಕ್ಷಣೆಗೆ ಮುಂದಾಗಬೇಕೆಂದರು. ಕಾಲೇಜಿನ ಪ್ರಾಂಶುಪಾಲ ಯು.ಎಸ್. ಶಿವಕುಮಾರ್ ಉಪನ್ಯಾಸಕರಾದ ಟಿ.ಸೋಮು , ಸಿ.ಸ್ಮಿತಾ, ನಂದಿನಿ, ರಾಜೇಶ್, ಪುಟ್ಟಸ್ವಾಮಿ ಇತರರು ಹಾಜರಿದ್ದರು.