ಮಂಡ್ಯ ನಗರದ ವಕೀಲರ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು. 
ಮಂಡ್ಯ

ದೂರದೃಷ್ಟಿಯ ಚಿಂತಕ ಎಸ್‌ಎಂಕೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಮಾಜಿ ಸಿಎಂ ಕೃಷ್ಣ ಸಂಸ್ಮರಣೆ
  • ವಕೀಲರ ಸಂಘದಿಂದ ಆಯೋಜನೆ
ಮಂಡ್ಯ; ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಕಠಿಣವಾಗಿತ್ತು. ಬರಗಾಲ, ಕಾವೇರಿ ನೀರು ಹೋರಾಟ, ಡಾ.ರಾಜಕುಮಾರ್ ಅಪಹರಣವನ್ನು ನಿರರ್ಗಳವಾಗಿ ಬಗೆಹರಿಸಿದವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಆಡಳಿತ ಸಂದರ್ಭವನ್ನು ಮೆಲುಕು ಹಾಕಿದರು.
ನಗರದ ವಕೀಲರ ಸಂಘದಲ್ಲಿ ಆಯೋಜಿಸಿದ್ದ ಎಸ್.ಎಂ.ಕೃಷ್ಣ ಸಂಸ್ಮರಣೆ ಹಾಗೂ ಜಂಟಲ್ ಮನ್ ರಾಜಕಾರಣಿಯ ನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಅವರು ಸ್ಟೈಲಿಶ್ ರಾಜಕಾರಣಿ. ಶಿಸ್ತುಬದ್ಧ ಜೀವನವನ್ನು ನಡೆಸಿದವರು. ಮೈಸೂರು-ಬೆಂಗಳೂರು ರಸ್ತೆಯನ್ನು ಪ್ರಾರಂಭ ಮಾಡಿದವರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅವರನ್ನು ಬಳಸಿಕೊಳ್ಳಲಿಲ.್ಲ ಕೆಂಗಲ್ ಹನುಂತಯ್ಯ ಅವರು ವಿಧಾನಸೌಧ ನಿರ್ಮಾಣ ಮಾಡಿದರೆ ಅದರ ಪಕ್ಕದಲ್ಲಿಯೇ ವಿಕಾಸಸೌಧ ನಿರ್ಮಿಸಿ ಮಾದರಿಯಾದ ಹಾಗೂ ದೂರದೃಷ್ಟಿಯುಳ್ಳ ಚಿಂತಕರೆನಿಸಿದವರು ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ದೂರದೃಷ್ಟಿಯುಳ್ಳ ಅಭಿವೃದ್ಧಿಯ ಜಂಟಲ್ ಮ್ಯಾನ್ ರಾಜಕಾರಣಿ ಎಸ್.ಎಂ.ಕೃಷ್ಣ ಅವರಾಗಿದ್ದರು. ರಾಜಕೀಯದಲ್ಲಿ ಎಸ್.ಎಂ ಕೃಷ್ಣ ಅವರು ಅಂತಾರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚು ಒತ್ತು ನೀಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಮಾದರಿ ನಾಯಕರು. ರಾಜ್ಯದ ಮುಖ್ಯಮಂತ್ರಿ ಆಗಿ ಬಜೆಟ್ ಗಾತ್ರವನ್ನು ಹೆಚ್ಚಿಸಿ ಅಭಿವೃದ್ಧಿಗೆ ನಾಂದಿ ಹಾಡಿದ ಮಹಾನ್ ನಾಯಕರೆಂದು ಸ್ಮರಿಸಿದರು.
ಮೈಸೂರಿನ ರಾಮಕೃಷ್ಣ ಆಶ್ರಮ ಅಧ್ಯಕ್ಷ ಮುಕ್ತಿದಾನಂದ ಮಹಾರಾಜ್ ಸ್ವಾಮೀಜಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಯಾವ ಪರಿಸ್ಥಿತಿಯಲ್ಲಿಯೂ ಯಾವುದೇ ಒತ್ತಡಕ್ಕೆ ಒಳಗಾಗದೆ, ಸಹಜವಾಗಿಯೇ ಕೆಲಸ ನಿರ್ವಹಿಸುತ್ತಿದ್ದರು. ಅವರ ವ್ಯಕ್ತಿತ್ವ ಈಗಿನ ರಾಜಕಾರಣಿಗಳಿಗೆ ಅವಶ್ಯವಾಗಿ ಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, ಹತ್ತಿರದಿಂದ ನಾನು ಎಸ್.ಎಂ.ಕೃಷ್ಣ ಅವರನ್ನು ನೋಡಿಲ್ಲ. ಆದರೆ ರಾಜಕಾರಣದಲ್ಲಿ ಉನ್ನತ ಹುದ್ದೆ ಪಡೆದರು. ಮುಖ್ಯಮಂತ್ರಿ ಸ್ಥಾನದಿಂದ ಹಿಡಿದು ವಿದೇಶಾಂಗ ಸಚಿವ ಸ್ಥಾನದವರೆಗೂ ಉತ್ತಮ ಕೆಲಸ ಮಾಡಿದ ಮಹಾನ್ ವ್ಯಕ್ತಿಯಾಗಿದ್ದರು. ಅವರ ಆಡಳಿತಾವಧಿಯಲ್ಲಿ ಬರಗಾಲ ಬಂದರೂ ಅದನ್ನು ನಿಭಾಯಿಸಿದ್ದ ಮಹನೀಯರು. ಬೆಂಗಳೂರಿಗೆ ಕೊಟ್ಟಂತಹ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಹಿರಿಯ ವಕೀಲರೂ ಆದ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು. ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಕಾರ್ಯದರ್ಶಿ ಸತೀಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ, ಮುಖಂಡರಾದ ಎಚ್.ಎನ್.ಯೋಗೇಶ್, ಚಲುವರಾಜು ಇತರರಿದ್ದರು.