ಪಾಂಡವಪುರ ಪಟ್ಟಣದ ಐದು ದೀಪದ ವೃತ್ತದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ( 
ಮಂಡ್ಯ

ರಾಜ್ಯದಲ್ಲಿ ಭೀಕರ ಬರ ಎದುರಾಗುವ ಸ್ಥಿತಿ

ಪಾಂಡವಪುರ: ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 6 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ವಿರೋಧಿಸಿ ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿ ಘೋಷಣೆ ಕೂಗಿದರು. ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸದೆ ರಾಜ್ಯದ ರೈತರ ಹಿತಕಾಯಬೇಕು ಎಂದು ಒತ್ತಾಯಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ರಾಜ್ಯದ ರೈತರ ಹಿತ ಮರೆತು ಪದೇ ಪದೆ ತಮಿಳುನಾಡು ಪರವಾಗಿ ಆದೇಶ ನೀಡುವ ಮೂಲಕ ಕರ್ನಾಟಕದ ಜನತೆಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಸಿಡಬ್ಲುೃಆರ್‌ಸಿ ಹಾಗೂ ಸುಪ್ರೀಂ ಕೋರ್ಟ್ ಇದೇ ರೀತಿ ಆದೇಶ ನೀಡುತ್ತಿದ್ದರೆ ಕೋರ್ಟ್ ಮೇಲಿರುವ ನಂಬಿಕೆಯನ್ನು ರಾಜ್ಯದ ಜನತೆ ಕಳೆದುಕೊಳ್ಳಲಿದ್ದಾರೆ ಎಂದರು.
ರಾಜ್ಯದ ನಾಲ್ಕು ಅಣೆಕಟ್ಟೆಯಲ್ಲಿ ಕೇವಲ 63 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದೆ. ಇದರಲ್ಲಿ 20 ಟಿಎಂಸಿ ಡೆಡ್ ಸ್ಟೋರೇಜ್. ಉಳಿದ ನೀರು ಜನ-ಜಾನುವಾರುಗಳಿಗೆ ಕುಡಿಯಲು ಸಾಕಾಗುವುದಿಲ್ಲ. ರೈತರು 45-50 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗುವ ಸ್ಥಿತಿ ಕಾಣುತ್ತಿದೆ. ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಮನವಿ ಮಾಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ರಘು, ಚಲುವರಾಜು, ನಾಗರಾಜು, ವೆಂಕಟೇಶ್, ವಕೀಲ ಮುರಳಿ, ಹಾಳಯ್ಯ, ಪುರುಷೋತ್ತಮ್, ಶಿವಕುಮಾರ್, ಮಹದೇವು, ಲಕ್ಷ್ಮೇಗೌಡ, ಕ್ಯಾತನಹಳ್ಳಿ ಅನಿತಾ, ಲತಾ ಹಾಜರಿದ್ದರು.