ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದ ಸಿದ್ಧಗಂಗಾ ಶ್ರೀಗಳ 119ನೇ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅನ್ನ ದಾಸೋಹ ಏರ್ಪಡಿಸಲಾಗಿತ್ತು. 
ಮಂಡ್ಯ

ಗೋವಿಂದನಹಳ್ಳಿ ಗ್ರಾಮಸ್ಥರಿಂದ ಸಿದ್ಧ್ದಗಂಗಾ ಶ್ರೀ ಸ್ಮರಣೆ

ಕಿಕ್ಕೇರಿ: ನಡೆದಾಡುವ ದೇವರಾಗಿ ಜನಸಾಮಾನ್ಯರಿಗೆ ಬಲು ಹತ್ತಿರವಾಗಿ ಉಳಿದ ಮಹಾನ್ ತೇಜಸ್ಸು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಗೋವಿಂದನಹಳ್ಳಿ ಗ್ರಾಮಸ್ಥರು ಸ್ಮರಿಸಿದರು.
ಶರಣರ ಗ್ರಾಮವಾದ ಹೋಬಳಿಯ ಗೋವಿಂದನಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ 119ನೇ ಜಯಂತಿಯನ್ನು ಗ್ರಾಮಸ್ಥರು ದೊಡ್ಡ ಹಬ್ಬದಂತೆ ಆಚರಿಸಿದರು. ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ವಿಭೂತಿ ತಿಲಕವಿಟ್ಟುಕೊಂಡು ಪೂಜ್ಯರ ಪ್ರತಿಮೆ ಬಳಿ ಸಾಗಿದರು. ಪ್ರತಿಮೆಗೆ ಸುಗಂಧ ಪರಿಮಳ ಪುಷ್ಪವನ್ನು ಹಾಕಿ ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಕೆಲಹೊತ್ತು ಸಿದ್ಧಗಂಗಾ ಶ್ರೀ ಹಾಗೂ ಬಸವೇಶ್ವರರ ಕುರಿತು ಭಜನೆ ಮಾಡಿದರು. ಸಿದ್ಧ್ದಗಂಗಾ ಶ್ರೀಗಳ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿದರು.
ತ್ರಿವಿಧ ದಾಸೋಹಿಗಳಾಗಿ ಅಕ್ಷರ, ಅನ್ನ, ವಸತಿ ದಾಸೋಹದ ಮೂಲಕ ಲಕ್ಷಾಂತರ ಜನರಿಗೆ ಕಲಿಯುಗದ ದೇವರಾಗಿದ್ದಾರೆ. ಶ್ರೀಗಳ ಹೆಸರಿನಲ್ಲಿ ಅನ್ನದಾಸೋಹ ದಿನವಾಗಿ ಪವಿತ್ರ ದಿನವನ್ನು ಆಚರಿಸುತ್ತಿರುವುದು ಇಡೀ ನಾಡಿಗೆ ಸಂದ ಗೌರವವಾಗಿದೆ. ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಬೇಕು. ಆಧುನಿಕ ಬಸವಣ್ಣನವರಾದ ಶ್ರೀಗಳು ರಾಜಕೀಯಮುಕ್ತ ಸಂತರಾಗಿದ್ದು, ಇವರ ಆಶ್ರಯದಲ್ಲಿ ಬೆಳೆದ ಸಹಸ್ರಾರು ಮಕ್ಕಳು ಉನ್ನತ ಪದವಿ, ಸಂಸ್ಕಾರವಂತರಾಗಿ ನಾಡಿನಲ್ಲಿ ಬಾಳುತ್ತಿರುವುದು ನಾಡಿನ ಸುದೈವ ಎಂದು ಗ್ರಾಮಸ್ಥರು ಸ್ಮರಿಸಿದರು.
ಗ್ರಾಮದಲ್ಲಿ ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡಿರುವ ಅಸಂಖ್ಯಾತ ಭಕ್ತರು ಇರುವುದು ಶ್ರೀಗಳು ತಮ್ಮ ಊರಿನ ಮೇಲೆ ಇಟ್ಟಿರುವ ಪ್ರೀತಿಯಾಗಿದೆ ಎಂದು ನೆನೆದರು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪಗಳಿಂದ ಅಲಂಕರಿಸಿ ಪುಷ್ಪ ನಮನ ಸಲ್ಲಿಸಿ ಪೂಜಿಸಲಾಯಿತು. ಸಾಮೂಹಿಕ ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.