ಹಲಗೂರಿನ ಕಾಳಿಕಾಂಬ ದೇವಸ್ಥಾನದಲ್ಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ ಪೂಜೆ ಪುನಸ್ಕಾರದಲ್ಲಿ ಪಾಲ್ಗೊಂಡ ಭಕ್ತರು.  
ಮಂಡ್ಯ

ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಚಾಲನೆ

ಹಲಗೂರು: ಸಮೀಪದ ಚಿಲ್ಲಾಪುರ ಗ್ರಾಮದಲ್ಲಿ ಏ.2ರಿಂದ ಏ.5ರವರೆಗೆ ಮೂರು ದಿನಗಳ ನಡೆಯುವ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಗುರುವಾರ ಸಂಜೆ ಮುತ್ತತ್ತಿ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನದಿಂದ ಚಾಲನೆ ನೀಡಲಾಯಿತು.
ಗುರುವಾರ ಶುಭ ಮುಹೂರ್ತದಲ್ಲಿ ಬೆಳಗ್ಗೆ 7.30ರಿಂದ 8.45 ಗಂಟೆಗೆ ಪುಣ್ಯಾಹ, ಅಭಿಷೇಕ, ನವಗ್ರಹ ಪೂಜೆ, ಹೋಮ, ಧ್ವಜಾರೋಹಣ, ಮಧ್ಯಾಹ್ನ 12 ಗಂಟೆಗೆ ಸ್ವಾಮಿಯ ಗದ್ದಿಗೆ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು
ಮಧ್ಯಾಹ್ನ 2 ಗಂಟೆಗೆ ಶ್ರೀ ಸಿದ್ದಪ್ಪಾಜಿ ಸ್ವಾಮಿಯ ಕಂಡಾಯಕ್ಕೆ ಹೂ ಹೊಂಬಾಳೆ ಸಲ್ಲಿಸಿ, ಗಂಗಾ ಸ್ನಾನ ನಂತರ ಉತ್ಸವದೊಂದಿಗೆ ಸಿದ್ದಪ್ಪಾಜಿ ಸ್ವಾಮಿಯ ಕಂಡಾಯವನ್ನು ಮುತ್ತತ್ತಿ ರಸ್ತೆಯಲ್ಲಿರುವ ಕಾಳಿಕಾಂಬ ದೇವಸ್ಥಾನಕ್ಕೆ ತರಲಾಯಿತು.
ದೇವಸ್ಥಾನದ ಕಾರ್ಯದರ್ಶಿ ರಾಮಚಂದ್ರಾಚಾರಿ ಮಾತನಾಡಿ, ಏ.3ರಂದು ಬೆ.6 ಗಂಟೆಗೆ ಹೆಜ್ಜೆ ನಮಸ್ಕಾರ, ಉರುಳು ಸೇವೆ, ಮುಡಿ ಸೇವೆ, ನೀಲಗಾರಿಕೆ, ದೊಡ್ಡಮ್ಮ ತಾಯಿಯ ಗದ್ದಿಗೆಗೆ ಅಭಿಷೇಕ ಮತ್ತು ಹೂವಿನ ಅಲಂಕಾರ ಮಹಾಮಂಗಳಾರತಿಯು ನಡೆಯಲಿದೆ. ನಂದಿ ಬಸವೇಶ್ವರನಿಗೆ ಹಾಲು ಅಭಿಷೇಕ, ಎಣ್ಣೆ ಮಜ್ಜನ ಸೇವೆ, ಕಾದಗಟ್ಟಿಗೆ ಫಲಾಹಾರ ಪೂಜೆ, ಮಧ್ಯಾಹ್ನ 12 ಗಂಟೆಗೆ ಉಪ್ಪರಿಗೆ ಬಸವೇಶ್ವರನಿಗೆ ಎಣ್ಣೆ ಮಜ್ಜನ, ಸೇವೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಏ. 4ರಂದು ಬೆಳಗ್ಗೆ 9 ಗಂಟೆಗೆ ಹಲಗೂರು ಗ್ರಾಮಸ್ಥರಿಂದ ಶ್ರೀ ಮುತ್ತಾಂಜನೇಯ ಸೇವೆ ಮತ್ತು ಅನ್ನ ಸಂತರ್ಪಣೆ ನಡೆಸುವುದರ ಜತೆಗೆ ಚಂದ್ರಮಂಡಲ, ಸಾಲಗತ್ತಿ ಪೂಜೆ, ಬಸಪ್ಪನ ಪೂಜೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಟ್ರಸ್ಟಿನ ಅಧ್ಯಕ್ಷ ಪಿ ಈಶಕುಮಾರ್, ಕಾರ್ಯದರ್ಶಿ ರಾಮಚಂದ್ರ, ಎಚ್.ಕೆ.ಶಿವಾಚಾರಿ, ಅನಂತಸ್ವಾಮಿ, ಅಪ್ಪಾಜಿ, ಉಮೇಶ ಇತರರು ಇದ್ದರು.