ಹೊಸಹಳ್ಳಿ ಗ್ರಾಮದ ಸಿದ್ದಮಲ್ಲೇಶ್ವರ ಪಟ್ಟದ ಮಠದ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೋಮ-ಹವನ, ಪೂಜಾ ಕೈಂಕರ್ಯ ನೆರವೇರಿತು. 
ಮಂಡ್ಯ

ಹೊಸಹಳ್ಳಿಯಲ್ಲಿ ಸಿದ್ದಮಲ್ಲೇಶ್ವರ ಮಠ ಉದ್ಘಾಟನೆ

ಮಳವಳ್ಳಿ :ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ ಉದ್ಘಾಟನೆಯೊಂದಿಗೆ ಶುಕ್ರವಾರ ಮೂರು ದಿನಗಳ ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು.
ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಶಿವ ಶರಣರು 1935ರಲ್ಲಿ ಸಿದ್ದಮಲ್ಲೇಶ್ವರ ದಾಸೋಹ ಮಠ ಕಟ್ಟಿದ್ದರು. ಅಂದು ಶ್ರೀ ಮಠದ ಆಶ್ರಮಾಧಿಕಾರವನ್ನು ಗ್ರಾಮದ ಮಹಂತಸ್ವಾಮೀಜಿ ವಹಿಸಿಕೊಂಡು ಧಾರ್ಮಿಕ ಕಾರ್ಯ ನಡೆಸಿದ್ದು, ಅವರ ಕಾಲವಾದ 15 ವರ್ಷಗಳ ಕಾಲ ನಂತರ ಇಲ್ಲಿನ ಮಠವನ್ನು ಪೀಠಾಧಿಕಾರಿ ಓಂ ಕಾರೇಶ್ವರ ಸ್ವಾಮೀಜಿ ಮುನ್ನಡೆಸುತ್ತಿದ್ದಾರೆ. ಭಕ್ತರ ಸಹಕಾರದಿಂದ ಮಠದ ನೂತನ ಕಟ್ಟಡ ಹಾಗೂ ಪ್ರಾರ್ಥನಾ ಮಂದಿರ ನಿರ್ಮಾಣವಾಗಿದೆ. ಕನಕಪುರ ದೇಗುಲ ಮಠದ ಡಾ. ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಸೋಮನಹಳ್ಳಿ ಶೀಲಮಠದ ವೀರ ಸಿಂಹಾಸನ ಸಿದ್ಧಮಲ್ಲ ಸ್ವಾಮೀಜಿ, ಬಿಜಿಪುರ ಹೊರಮಠದ ಚಂದ್ರಶೇಖರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಮಠದ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರದಿಂದ ಆರಂಭಗೊಂಡಿದ್ದು, 5ರವರೆಗೆ ಗ್ರಾಮದಲ್ಲಿ ಸಂಭ್ರಮ ಇರಲಿವೆ.
ಶುಕ್ರವಾರ ಮಠದ ನೂತನ ಕಟ್ಟಡವನ್ನು ಹರಗುರು ಚರಮೂರ್ತಿಗಳ ಸಮ್ಮಮುಖದಲ್ಲಿ ಉದ್ಘಾಟನೆ ಮಾಡಲಾಯಿತು. ಏ. 4ರ ಶನಿವಾರ ಬೆಳಗ್ಗೆ 6 ಗಂಟೆಗೆ ಏಕದಶ ರುದ್ರಪೂಜೆ ಮತ್ತು ಶಿವಪೂಜೆ, ಪಾದಪೂಜೆ ನಡೆಯಲಿವೆ. ರಾತ್ರಿ 9ರ ನಂತರ ಗ್ರಾಮದಲ್ಲಿ ವಿವಿಧ ಕಲಾ ತಂಡಗಳೊಡನೆ ವೀರಗಾಸೆ, ನಂದಿಧ್ವಜ ಉತ್ಸವದ ಮೆರವಣಿಗೆ ನಡೆಯಲಿದೆ.
ಏ. 5ರ ಭಾನುವಾರ ಮುಂಜಾನೆ ವಿವಿಧ ಮಠಾಧೀಶರು ಮಹಾಂತ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸುವರು. ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆ ಆಯೋಜಿಸಿದ್ದು, ಸಾನ್ನಿಧ್ಯವನ್ನು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸುವರು.
ತುಮಕೂರು ಸಿದ್ಧಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ದೇವನೂರು ಗುರು ಮಲ್ಲೇಶ್ವರ ಮಠದ ಮಹಾಂತ ಸ್ವಾಮೀಜಿ ಕಾರ್ಯಕ್ರಮದ ಭಾಗವಹಿಸುವರು.
ಇದೇ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಿದ್ದಮಲ್ಲೇಶ್ವರ ಪ್ರಾರ್ಥನಾ ಮಂದಿರ ಉದ್ಘಾಟನೆ ಮಾಡಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ ದಾಸೋಹ ಭವನ ಉದ್ಘಾಟಿಸುವರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.