ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಶ್ರಮಿಕರಿಗೆ ಶ್ರಮಸ್ತ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
- ಶಮಸ್ತ್ರೀ ಪ್ರಶಸ್ತಿ ಪ್ರದಾನ
- ನಗರದ ಖಾಸಗಿ ಹೋಟೆಲ್ ನಲ್ಲಿ ಸಮಾರಂಭ
ಮಂಡ್ಯ: ಜಾಗತಿಕ ಮಟ್ಟದಲ್ಲಿ ಮಹಿಳಾ ಸಬಲೀಕರಣದ ಜತೆಗೆ ಲಿಂಗ ಅಸಮಾನತೆ ತೊಡೆದು ಹಾಕುವುದು ಅತ್ಯವಶ್ಯಕ ಎಂದು ಯುವ ಸಾಹಿತಿಯೂ ಆದ ಕನ್ನಿಕಾಶಿಲ್ಪಾ ನವೋದಯ ಶಿಕ್ಷಣ ತರಬೇತಿ ಸಂಸ್ಥೆ ಅಧ್ಯಕ್ಷೆ ಎಚ್.ಆರ್.ಕನ್ನಿಕಾ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲೆ ಮಂಡ್ಯ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಶ್ರಮಸ್ತ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕ ಸಮಾಜದಲ್ಲಿ ಸಾಧಕ ಮಹಿಳೆಯರ ಹಿಂದೆ ಪಾಲಕರ ಬೆಂಬವಿರುತ್ತದೆ. ಸಬಲೀಕರಣಕ್ಕೆ ಹೆಚ್ಚು ಮಹತ್ವ ನೀಡುವ ಕಾನೂನುಗಳು ರಕ್ಷಣೆಯಾಗಿರುತ್ತದೆ. ಅದಕ್ಕೆ ತಕ್ಕಂತೆ ತಮ್ಮದೇ ಆದ ಕೌಶಲಜ್ಞಾನ, ಪರಿಶ್ರಮ ಸಾಧನೆಗೆ ರಹದ್ದಾರಿಯಾಗಿರುತ್ತದೆ. ಸಂವಿಧಾನ ಜಾರಿಯಾದ ನಂತರದ ಮಹಿಳೆಯರ ಎಲ್ಲ ಕ್ಷೇತ್ರಗಳು ಸಬಲೀಕರಣಗೊಳ್ಳುತ್ತಿವೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆಯು ಸಾಧನೆ ಮಾಡುತ್ತಿದ್ದಾಳೆ ಎಂದರು.
ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜ್ ವಿ.ಭೈರಿ ಮಾತನಾಡಿ, 1908ರಲ್ಲಿ ನ್ಯೂಯಾರ್ಕ್‌ನಲ್ಲಿ ಮಹಿಳಾ ಕಾರ್ಮಿಕರು ಉತ್ತಮ ವೇತನ ಮತ್ತು ಮತದಾನದ ಹಕ್ಕಿಗಾಗಿ ನಡೆಸಿದ ಪ್ರತಿಭಟನೆಯೇ ಈ ದಿನದ ಮೂಲವಾಗಿದೆ. ಜಾಗತಿಕವಾಗಿ ಮಹಿಳೆರು ವಿದ್ಯಾವಂತರಾಗಿ ದೇಶದ ಪ್ರಗತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಉದ್ಯೋಗ-ಉದ್ಯಮಗಳಲ್ಲಿ ಮಹಿಳೆಯರು ಹೆಚ್ಚುತ್ತಿದ್ದಾರೆ ಎಂದು ತಿಳಿಸಿದರು.
ಅಲಯನ್ಸ್ ಸಂಸ್ಥೆ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ನಾಗರಿಕ ಸಮಾಜದಲ್ಲಿ ಎಲೆಮರೆಕಾಯಿಯಂತೆ ದುಡಿಯುವ ಸಾಕಷ್ಟು ಮಹಿಳೆಯರಿದ್ದಾರೆ. ಸಾಧನೆ ಮಾಡಿರುವ ಮಹಿಳೆಯರು ಮತ್ತು ಶ್ರಮಪಡುವ ಮಹಿಳೆಯುರು ನಮ್ಮ ನಡುವೆ ಇದ್ದಾರೆ. ಅಂತಹವರನ್ನು ಪುರಸ್ಕರಿಸುವುದು ಉತ್ತಮ. ವಿಶ್ವಸಂಸ್ಥೆಯ ಘೋಷವಾಕ್ಯದಂತೆ ಎಲ್ಲ ಮಹಿಳೆಯರಿಗಾಗಿ ಹಕ್ಕುಗಳು, ನ್ಯಾಯಕ್ಕೆ ಬೆಂಬಲಿಸಿ. ಜತೆಗೆ ಆರ್ಥಿಕ ಪ್ರಗತಿಗೆ ಎಲ್ಲರ ಸಹಕಾರ ಅತ್ಯಾವಶ್ಯಕ ಎಂದು ಹೇಳಿದರು.
ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಮಾದೇಗೌಡ, ಪದಾಧಿಕಾರಿಗಳಾದ ಪ್ರೊ.ಡೇವಿಡ್, ಡಾ.ರತ್ಮಮ್ಮ, ಶಿಕ್ಷಕ ಶಶಿಧರ್ ಈಚಗೆರೆ, ಧನಂಜಯ್ ದರಸಗುಪ್ಪೆ, ಡಾ.ಶಿವಕುಮಾರ್, ಚಂದ್ರಶೇಖರ್ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜನಾ, ಮೇಘಶ್ರೀ, ಎಚ್.ಸಿ.ವನಿತಾಕುಮಾರಿ, ರಾಧಾ, ರೇಖಾ, ಮಮತಾ, ಲಕ್ಷ್ಮೀ, ರೂಪಾ, ಅಮೃತಮಯಿ, ದೇವಮ್ಮ, ಪುಟ್ಟಮ್ಮ, ಶಾಂತಿ, ರಾಜಮ್ಮ ಅವರಿಗೆ ಶ್ರಮಸ್ತ್ರೀ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.