ಶ್ರೀರಂಗಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಇತ್ತೀಚೆಗೆ ರೈತರು ಮತ್ತು ಕೃಷಿ ಪರಿಕರಗಳ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ಜಾಾಗೃತಿ ಕಾರ್ಯಕ್ರಮದಲ್ಲಿ ಮಂಡ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಬೇಸಾಯ ಶಾಸ್ತ್ರಜ್ಞ ಡಾ.ಸತೀಶ್ ಕುಮಾರ್ ಮಾತನಾಡಿದರು.
ಪ್ರಸ್ತುತ ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ನೀರಾವರಿ ಬೆಳೆಗಳಾದ ಭತ್ತ, ಕಬ್ಬು ಬೆಳೆಗೆ ಪರ್ಯಾಯವಾಗಿ ಮಿತ ನೀರು ಬಳಕೆಯಲ್ಲಿ ಬೆಳೆಯುವ ರಾಗಿ, ಅಲಸಂದೆ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಳೆಯಲು ಆಸಕ್ತಿ ತೋರಬೇಕು ಎಂದು ಮಂಡ್ಯದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಬೇಸಾಯ ಶಾಸ್ತ್ರಜ್ಞ ಡಾ.ಸತೀಶ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಇತ್ತೀಚೆಗೆ ರೈತರು ಮತ್ತು ಕೃಷಿ ಪರಿಕರಗಳ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ರಸಗೊಬ್ಬರಗಳ ಸಮತೋಲನ ಬಳಕೆ ಹಾಗೂ ಅರೆ ನೀರಾವರಿ ಪದ್ಧತಿಯ ಕೃಷಿಗೆ ಆದ್ಯತೆ ನೀಡಲು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಾರಿ ಮಳೆ ಕೊರತೆ ಕಾರಣ ಕೆಆರ್‌ಎಸ್ ಜಲಾಶಯ ಭರ್ತಿಯಾಗದ ಹಿನ್ನೆಲೆ ಭತ್ತ, ಕಬ್ಬು ಸೇರಿದಂತೆ ತೋಟಗಾರಿಕೆ ಬೆಳೆ ಬೆಳೆಯಲು ಕಷ್ಟವಾಗಿದೆ. ಇದು ನಷ್ಟಕೂ ಕಾರಣವಾಗಲಿದೆ. ಹೀಗಾಗಿ ಸಾಂಪ್ರಾದಾಯಿಕ ಬೆಳೆಗಳ ಮೇಲೆ ಹೆಚ್ಚು ಅವಲಂಬನೆಯಾಗುವ ಬದಲು ಅರೆ ನೀರಾವರಿ ಪದ್ಧತಿಯಲ್ಲಿ ಬೆಳೆಯುವ ರಾಗಿ, ಅಲಸಂದೆ, ದ್ವಿದಳ ಧಾನ್ಯಗಳನ್ನು ಬೆಳೆಯಲು ಆದ್ಯತೆ ನೀಡಬೇಕು. ರೈತರು ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆಯಡಿ ನಿಮ್ಮ ಜಮೀನುಗಳಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಮಳೆಗಾಲದಲ್ಲಿ ಬಿದ್ದ ಮಳೆ ನೀರು ಸಂಗ್ರಹಿಸಿ ಆ ನೀರಿನ ಸದ್ಬಳಕೆಯಿಂದ ಅಗತ್ಯಕ್ಕೆ ತಕ್ಕಂತೆ ಕೃಷಿ ಮಾಡಬೇಕು ಎಂದು ತಿಳಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಭತ್ತ, ರಾಗಿ, ಟೊಮ್ಯಾಟೊ ಬೆಳೆಗಳಿಗೆ ವಿಮಾ ಯೋಜನೆ ಘೋಷಿಸಲಾಗಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಅಂರ್ತಜಲಮಟ್ಟ ಕುಸಿದಿದ್ದು, ಕಬ್ಬು ಬೆಳೆಯುವ ರೈತರು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಕೃಷಿ ಇಲಾಖೆ ಶೇ.90 ರಿಯಾಯಿತಿ ನೀಡಿದ್ದು, ಇದನ್ನು ಅಳವಡಿಸಿಕೊಂಡು ಕೃಷಿ ಮಾಡಿದ್ದಲ್ಲಿ 1 ಎಕರೆ ಬದಲು 2 ಎಕರೆಯಲ್ಲಿ ಕಬ್ಬು ಬೆಳೆಯಬಹುದು ಎಂದು ಸಲಹೆ ನೀಡಿದರು.
ಕೃಷಿ ಅಧಿಕಾರಿಗಳಾದ ಗೀತಾ, ಶ್ರೀಧರ್, ಆತ್ಮಯೋಜನೆ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಕಾವ್ಯಾ, ಕೃಷಿ ಸಖಿಯರು ಉಪಸ್ಥಿತರಿದ್ದರು.