ಮಳವಳ್ಳಿ ಪಟ್ಟಣದಲದಲ್ಲಿ ಪ್ರವೇಶ ದ್ವಾರಗಳನ್ನು ಸಿದ್ದಪಡಿಸಿರುವುದು.
ಮಳವಳ್ಳಿ : ಸುತ್ತೂರು ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066 ನೇ ಜಯಂತಿ ಮಹೋತ್ಸವ ಆಚರಣೆ ಇಂದಿನಿಂದ 8 ದಿನಗಳ ಕಾಲ ಜರುಗಲಿದೆ.
ಡಿ.15 ರಿಂದ 22ರ ವರೆಗೆ ಭಾರತೀಯ ಸಂಸ್ಕೃತಿ, ಧಾರ್ಮಿಕತೆ ಹಾಗೂ ಭಾವೈಕ್ಯತೆ ವೈಭವಗಳನ್ನು ಭಕ್ತ ವೃಂದ ಕಣ್ತುಂಬಿಕೊಳ್ಳಬಹುದಾಗಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಸಮ್ಮುಖದಲ್ಲಿ ಜಯಂತಿ ಆಚರಣೆ ನಡೆಯಲಿದೆ. ಪಟ್ಟಣದ ಮೈಸೂರು ರಸ್ತೆ ಶಾಂತಿ ಕಾಲೇಜು ಮುಂಭಾಗದ 33 ಎಕರೆ ಜಾಗದಲ್ಲಿ ಜಯಂತಿ ಮಹೋತ್ಸವಕ್ಕೆ ಬೃಹತ್ ವೇದಿಕೆ ಸಿದ್ದಪಡಿಸಲಾದೆ.
ಡಿ.15 ರಂದು ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರದಿಂದ ಮಳವಳ್ಳಿ ಪಟ್ಟಣಕ್ಕೆ ಆಗಮಿಸುವ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರವಾಸಿ ಮಂದಿರದ ಬಳಿ ಬರಮಾಡಿಕೊಳ್ಳಲಾಗುವುದು. ನಂತರ ಮೆರವಣಿಗೆ ಮೂಲಕ ಕರೆತಂದು ವೇದಿಕೆ ಬಳಿ ನಿರ್ಮಾಣಗೊಂಡಿರುವ ಶ್ರೀ ಷಡಕ್ಷರದೇವ ಅನುಭವ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಎಂಟು ದಿನಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಗುವುದು.
ಡಿ.16 ರಂದು ಮಧ್ಯಾಹ್ನ 3.15 ಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿದ್ಯದಲ್ಲಿ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದು, ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉಪಸ್ಥಿತರಿರಲಿದ್ದಾರೆ.
ಡಿ.21 ರಂದು ನಡೆಯುವ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಚಿವರಾರ ಎಚ್.ಸಿ.ಮಹದೇವಪ್ಪ, ಈಶ್ವರ್ ಖಂಡ್ರೆ, ಎಸ್. ಎಸ್.ಮಲ್ಲಿಕಾರ್ಜುನ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಇತರ ಶಾಸಕರು ಭಾಗವಹಿಸಲಿದ್ದಾರೆ.
15 ರಿಂದ 21 ರವರೆಗೆ ವಿವಿಧ ಸಾಂಸಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ, ಪೌರಾಣಿಕ ನಾಟಕ, ಭಕ್ತಿ ಗೀತೆ ಗಾಯನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ. ಬರುವ ಜನರಿಗೆ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಉಟೋಪಚಾರಕ್ಕೆ 33 ಕೌಂಟರ್‌ಗಳನ್ನುಸಿದ್ದಪಡಿಸಲಾಗಿದ್ದು, ವೇದಿಕೆ ಸುತ್ತಲೂ ವಿವಿಧ ವಸ್ತು ಪ್ರದರ್ಶನ ಹಾಗೂ ಮಾರಾಟ 130 ಕ್ಕೂ ಹೆಚ್ಚು ಮಳಿಗೆಳು ಅವಕಾಶ ಮಾಡಲಾಗಿದೆ.