16 ಎಂಎಲ್‌ವಿ 4 ಮೆರವಣಿಗೆಯಲ್ಲಿ ಪಥಸಂಚಲನ ನಡೆಸಿದ ಶಾಲಾ ವಿದ್ಯಾರ್ಥಿಗಳು. 
ಮಂಡ್ಯ

ಶಿವರಾತ್ರೀಶ್ವರ ಉತ್ಸವ ಮೂರ್ತಿ ಮೆರವಣಿಗೆ

ಲೋಕೇಶ್ ಮನು. ಡಿ
ಮಳವಳ್ಳಿ: ಪಟ್ಟಣದಲ್ಲಿ ಆಯೋಜಿಸಿರುವ ಸುತ್ತೂರು ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದ ಮೂರನೇ ದಿನವಾದ ಬುಧವಾರ ಉಗ್ರಾಣಪುರದ ದೊಡ್ಡಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ವೇದಿಕೆ ಬಳಿ ನಿರ್ಮಾಣಗೊಂಡಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ದೇವಸ್ಥಾನ ಮಂಟಪದ ಆವರಣದಲ್ಲಿ ಬೆಳಗ್ಗೆ 5.30 ರಿಂದ 7 ಗಂಟೆವರೆಗೆ ಸುಪ್ರಭಾತ, ಪ್ರಣವ ಪಂಚಾಕ್ಷರಿ ಮಹಾಮಂತ್ರ ಲೇಖನ ಹಾಗೂ ಶ್ರೀ ಮಠದ ನೂರಾರು ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆ 7 ಗಂಟೆಗೆ ಉಗ್ರಾಣಪುರದದೊಡ್ಡಿ ಪ್ರಮುಖ ವೃತ್ತದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಮಡೇನಹಳ್ಳಿ ತೋಂಟದಾರ್ಯ ಮಠದ ಶ್ರೀಅರುಣಾಚಲ ಸ್ವಾಮೀಜಿ ಹಾಗೂ ಚಂದೂಪುರ ರೇಣುಕಾಶ್ರಮದ ಶ್ರೀಶಿವಲಿಂಗ ಶಿವಚಾರ್ಯ ಸ್ವಾಮೀಜಿ ಧ್ವಜಾರೋಹಣ ನೇರವೇರಿಸಿದರು. ನಂತರ ಶಿವರಾತ್ರೀಶ್ವರ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಡನೆ ಪೂಜಾ ಕುಣಿತ ಮತ್ತು ವಿವಿಧ ಜಾನಪದ ಕಲಾ ತಂಡಗಳ ಜತೆಯಲ್ಲಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ವೇದಿಕೆ ಬಳಿಗೆ ಬರಲಾಯಿತು. ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ನೂರಾರು ಸ್ವಯಂ ಸೇವಕರು ಮೆರವಣಿಗೆಯುದ್ದಕ್ಕೂ ಜಾಗೃತಿ ಬರಹಗಳಿದ್ದ ಫಲಕಗಳನ್ನು ಹಿಡಿದು ಭಾವೈಕ್ಯ ಯಾತ್ರೆ ನಡೆಸುವ ಮೂಲಕ ಗಮನ ಸೆಳೆದರು.
ನಂತರ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಗದ್ದಿಗೆ ಮಂಟಪದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬುಧವಾರ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಮಗಳಿಗೆ ಚಾಲನೆ ನೀಡಲಾಯಿತು.
ಭಕ್ತರ ಉದರ ತಣಿಸಿದ ದಾಸೋಹ ಶ್ರೀ ಶಿವರಾತ್ರಿ ಶಿವಯೋಗಿಗಳ ಜಯಂತಿ ಆಚರಣೆ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುತ್ತಿದ್ದ ಭಕ್ತ ಸಮೂಹಕ್ಕೆ ವ್ಯವಸ್ಥಿತವಾಗಿ ದಾಸೋಹ ಕಲ್ಪಿಸಲಾಗಿತ್ತು. 33 ಕೌಂಟರ್‌ಗಳಲ್ಲಿ ದಿನಪೂರ್ತಿ ಸಹಸ್ರಾರು ಭಕ್ತರಿಗೆ ಬೆಳಗಿನ ತಿಂಡಿ, ಮಧ್ಯಾಹ್ನ, ರಾತ್ರಿ ಊಟೋಪಾಚಾರ ನೀಡಲಾಗುತ್ತಿದ್ದು, ನೂರಾರು ಬಾಣಸಿಗರು ಬಗೆಬಗೆಯ ಭೋಜನ ತಯಾರಿಸಿದ್ದರು. ಸ್ವಚ್ಛತೆಗಾಗಿ ಪುರಸಭೆ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ವಾಹನಗಳು ಸ್ಥಳಗಳಲ್ಲಿ ನಿಲ್ಲಿಸಲಾಗಿತ್ತು.
ಬುಧವಾರ ಪ್ರಸಾದ್ ಗೋವಿಂದ್ ಮತ್ತು ತಂಡದಿಂದ ಆಫ್ರೋ ಫ್ಯೂಷನ್ ಟ್ರೈಬಲ್ ವಾದ್ಯಗೋಷ್ಠಿ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ತಂಡದಿಂದ ರಸಮಂಜರಿ, ರಾತ್ರಿ ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಚಾರಿಟಬಲ್ ಟ್ರಸ್ಟ್ ಕಲಾವಿದರಿಂದ ದಕ್ಷಯಜ್ಞ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ಗಮನ ಸೆಳೆದ ವಸ್ತುಪ್ರದರ್ಶನ: ಶಿವರಾತ್ರೀಶ್ವರ ಜಯಂತಿ ಆಚರಣೆ ಮಹೋತ್ಸವ ನಡೆಯುತ್ತಿರುವ ವೇದಿಕೆ ಬಳಿ ತೆರೆಯಲಾಗಿರುವ 130ಕ್ಕೂ ಹೆಚ್ಚು ವಸ್ತುಪ್ರದರ್ಶನ ಮಳಿಗೆಗಳು ಜನರ ಗಮನ ಸೆಳೆದವು. ಮಳಿಗೆಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬುಧವಾರ ಉದ್ಘಾಟಿಸಿದರು.
ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು 18 ಮಳಿಗೆಗಳನ್ನು ತೆರೆಯಲಾಗಿದೆ. ಮಹಿಳಾ ಸ್ವ-ಸಹಾಯ ಸಂಘಗಳು ಉತ್ಪಾದಿಸುವ ವಿವಿಧ ಉತ್ಪನ್ನಗಳನ್ನು ಮಾರಾಟಕ್ಕೆ 25 ಮಳಿಗೆ ಹಾಗೂ ಸಂಪೂರ್ಣ ಸಾವಯವ ಕೃಷಿಕರ ಸಂಘದ ರೈತರು ಬೆಳೆದ ಸಿರಿಧಾನ್ಯ ಮತ್ತು ಇತರ ಉತ್ಪನ್ನಗಳ ಮಾರಾಟ ಹಾಗೂ ರೈತರಿಗೆ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ 2 ಮಳಿಗೆಗಳನ್ನು ತೆರೆಯಲಾಗಿದೆ.