ನೀರಾವರಿ ಸೌಲಭ್ಯಕ್ಕೆ ಒತ್ತಾಯಿಸಿ ಮಂಡ್ಯ ನಗರದ ಡಿಸಿ ಕಚೇರಿ ಎದುರು ಶಿಂಷಾ ನಾಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
- ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಮಂಡ್ಯ: ಮದ್ದೂರು ತಾಲೂಕು ಕೊಪ್ಪ ಹೋಬಳಿ ಭಾಗದ ಗ್ರಾಮಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಶಿಂಷಾ ನಾಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಡಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕೊಪ್ಪ ಭಾಗದ ರೈತರು, ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮದ್ದೂರು ತಾಲೂಕಿನಲ್ಲಿ ಕಾವೇರಿ ನೀರಾವರಿ ನಿಗಮ ವ್ಯಾಪ್ತಿಗೊಳಪಡುವ ಕೊಪ್ಪ ಹೋಬಳಿ ಸೇರಿದಂತೆ ಹೊಸಗಾವಿ, ಮಲ್ಲಿಗೆರೆ, ಕೌಡ್ಲೆ, ಬೆಕ್ಕರಳೆ, ಕಿರಂಗೂರು, ಹಳೇಹಳ್ಳಿ, ತರೀಕೆರೆ ಕಾಲನಿ, ಹರಳಕೆರೆ, ಮೂಡ್ಯ, ಚನ್ನಮ್ಮನಕೊಪ್ಪಲು, ಆಬಲವಾಡಿ, ಅರಗಿನಮೆಳೆ, ಟಿ.ಬೆಳ್ಳೆಕೆರೆ, ತಗ್ಗಹಳ್ಳಿ, ಅವ್ವೇರಹಳ್ಳಿ, ಅಂಕುಶಪುರ ಹಾಗೂ ಉಪ್ಪಾರನಕೊಪ್ಪಲು ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಕೃಷಿ ಮಾಡಲು ನೀರು ಸಾಕಾಗುತ್ತಿಲ್ಲ ಎಂದು ಆರೋಪಿಸಿದರು.
ಕೆಆರ್‌ಎಸ್ ಅಣೆಕಟ್ಟೆಯಿಂದ ಕಟ್ಟು ಪದ್ಧತಿಯಲ್ಲಿ ಕೊಪ್ಪ ಭಾಗದ ವಿಶ್ವೇಶ್ವರಯ್ಯ ನಾಲೆ, ಶಿಂಷಾ ಶಾಖಾ ನಾಲೆ, ಕೌಡ್ಲೆ ವಿತರಣಾ ನಾಲೆ ಖಾರಿಫ್ ಹಾಗೂ ರಬಿ ಬೆಳೆಗೆ ನೀರು ಒದಗಿಸಲಾಗುತ್ತಿದೆ. ಆದರೆ ಪರಿಪೂರ್ಣವಾಗಿ ನೀರು ಹರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೊಪ್ಪ ಕೆರೆಯಿಂದ ಏತ ನೀರಾವರಿ ಏರು ಕೊಳವೆ ಮುಖಾಂತರ ಚಿಕ್ಕಬಳ್ಳಿ ಪಿಕ್‌ಅಪ್ ನಾಲೆ ಸಂಪರ್ಕ ಕಲ್ಪಿಸಿ ದೇಶಹಳ್ಳಿ ಕರೆಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.
ಶಿಂಷಾ ನದಿಗೆ ಯಡವನಹಳ್ಳಿ ಹತ್ತಿರ ಚೆಕ್ ಡ್ಯಾಂ, ಪಂಪ್‌ಹೌಸ್ ಮತ್ತು ಜಾಕ್‌ವೇಲ್ ನಿರ್ಮಾಣ ಮಾಡಿ ನೀರು ಒದಗಿಸಬೇಕು. ಶ್ರೀರಂಗಪಟ್ಟಣ ತಾಲೂಕು ಶ್ರೀನಿವಾಸ ಅಗ್ರಹಾರ ಗ್ರಾಮದ ಬಳಿಯ ಲೋಕಪಾವನಿ ನದಿಯಿಂದ ನೀರನ್ನು ಮದ್ದೂರು ತಾಲೂಕು ತರೀಕೆರೆ ಕಾಲನಿ ಶಿಂಷಾ ಉಪ ನಾಲೆಯ ರೆಗ್ಯೂಲೇಟರಿಗೆ ಏರು ಕೊಳವೆ ಮುಖಾಂತರ ಕೊಪ್ಪ ಭಾಗದ ಮಳೆಯಾಶ್ರಿತ ಗ್ರಾಮಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಕೊಪ್ಪ ಹೋಬಳಿಯಿಂದ ಯಾವುದೇ ನೀರಾವರಿ ಪ್ರಸ್ತಾವನೆಗಳು ಬಂದಿಲ್ಲವೆಂದು ವಿಧಾನ ಪರಿಷತ್ ಸಭಾಧ್ಯಕ್ಷರಿಗೆ ತಪ್ಪು ಮಾಹಿತಿ ನೀಡಿರುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಬೋಳಾರೆ ಕೆರೆ ಸುಮಾರು 800 ಎಕರೆಯಲ್ಲಿ 700 ಎಕರೆ ಒತ್ತುವರಿಯಾಗಿದ್ದು, ಇಲ್ಲಿ ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಇಟ್ಟುಕೊಂಡು ತೋಟ ಮಾಡಿಕೊಂಡಿರುವ ಒತ್ತುವರಿ ಸ್ಥಳವನ್ನು ತಕ್ಷಣ ತೆರವುಗೊಳಿಸಬೇಕು, ಎಲ್ಲಿ ಕೆರೆ ಒತ್ತುವರಿ ಆಗಿದಿಯೋ ಅಲ್ಲಿ ಸರ್ವೆ ನಡೆಸಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಎಚ್.ಪುಟ್ಟಸ್ವಾಮಿಗೌಡ, ಸಿ.ತಮ್ಮಯ್ಯ, ವಿವಿಧ ಸಂಘಟನೆಯ ಮುಖಂಡರಾದ ವೆಂಕಟಗಿರಿಯಯ್ಯ, ರಾಜು, ಕಾಂತರಾಜ್, ತಂಗರಾಜು, ಕರೀಗೌಡ, ರಮೇಶ್ ಇತರರಿದ್ದರು.