ಕಿಕ್ಕೇರಿ ಸಮೀಪದ ಬೆಡದಹಳ್ಳಿ ಪಂಚಭೂತೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರ ಶಿಕ್ಷಣ ಶಿಬಿರ ಸಮಾರೋಪ ಸಮಾರಂಭದಲ್ಲಿ ಗಣ್ಯರು ಶಿಬಿರಾರ್ಥಿಗಳಿಗೆ ಪ್ರಶಾಂಸಾ ಪತ್ರ ವಿತರಿಸಿದರು. ಆರ್‌ಟಿಒ ಮಲ್ಲಿಕಾರ್ಜುನ, ರುದ್ರಮುನಿ ಸ್ವಾಮೀಜಿ, ಭಾರತೀಪುರ ಪುಟ್ಟಣ್ಣ, ಸುಜೇಂದ್ರಕುಮಾರ್, ಚಂದ್ರು ಮತ್ತಿತರರಿದ್ದರು.
ಕಿಕ್ಕೇರಿ : ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡುವುದು ಬಹಳ ಮುಖ್ಯ ಎಂದು ಸಮಾಜ ಸೇವಕ ಮಲ್ಲಿಕಾರ್ಜುನ ತಿಳಿಸಿದರು.
ಸಮೀಪದ ಬೆಡದಹಳ್ಳಿ ಗ್ರಾಮದ ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುವಾರ ವಸತಿ ಸಹಿತ ಸಂಸ್ಕಾರ ಜ್ಞಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮೊದಲೆಲ್ಲಾ ಬೇಸಿಗೆ ರಜಾ ಬಂದರೆ ನಾವು ಅಜ್ಜಿ, ಅಜ್ಜನ ಮನೆಗೆ ಹೋಗುತ್ತಿದ್ದೆವು. ಅಜ್ಜಿ ಮನೆಯೇ ನಮಗೆ ಬೇಸಿಗೆ ಶಿಬಿರವಾಗಿತ್ತು ಎಂದು ಬಾಲ್ಯದ ನೆನಪುಗಳನ್ನು ಮೆಲಕು ಹಾಕಿದರು. ವರ್ತಮಾನದಲ್ಲಿ ಮಕ್ಕಳು ಅಜ್ಜಿ ಮನೆಗೆ ಹೋಗುವುದು ತಪ್ಪಿದೆ. ಸಾಂಪ್ರದಾಯಕ ಆಟಗಳು ದೂರವಾಗಿವೆ. ಎಲ್ಲರಿಗೂ ಮೊಬೈಲ್ ಫೋನ್ ಮತ್ತು ಟಿವಿಗಳೇ ಸರ್ವಸ್ವವಾಗಿದೆ. ಇಂತಹ ಕೆಟ್ಟ ಪಿಡುಗು ದೂರವಾಗಿಸಲು ಈ ಮಠ ಉತ್ತಮವಾದ ಸೇವೆ ಮಾಡುತ್ತಿದೆ ಎಂದರು. ಮಕ್ಕಳಿಗೆ ಸಂಸ್ಕಾರ, ದೇಸಿ ಆಟ, ಸೃಜನಾತ್ಮಕ ಕಲೆ, ಕ್ರಿಯಾತ್ಮಕ ಚಟುವಟಿಕೆಗಳನ್ನು ಉಚಿತವಾಗಿ ಕಲಿಸುವ ಸೇವೆಯನ್ನು ಮಾಡುತ್ತಿರುವುದು ಭವಿಷ್ಯಕ್ಕೆ ಮಹತ್ತರ ಕೊಡುಗೆಯಾಗಲಿದೆ. ಇಂದಿನ ಮಕ್ಕಳು ನಾಳೆ ಸದೃಢ ಸಮಾಜ ನಿರ್ಮಿಸಲು ನಾಯಕರಾಗುತ್ತಾರೆ ಎಂದರು. ಶ್ರೀ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿ, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕೇವಲ ಶಾಲೆಗಳಲ್ಲಿ
ಪಠ್ಯ ಶಿಕ್ಷಣ ಪಡೆದರೆ ಸಾಲದು. ನಮ್ಮ ಸನಾತನ ಧರ್ಮ, ಸಂಸ್ಕೃತಿ ಮತ್ತು ದಿನನಿತ್ಯದ ಆಚರಣೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳ ಬೇಕು. ಶ್ರೀ ಮಠವು 3 ವರ್ಷಗಳಿಂದ ಶಿಬಿರ ಆಯೋಜಿಸುತ್ತಿದೆ. ಸಾಧಕರಿಗೆ, ಹಿರಿಯರಿಗೆ ಗೌರವಿಸುತ್ತಿದೆ. ಮತ್ತಷ್ಟು ಉತ್ತಮ ಆಲೋಚನೆಗಳೊಂದಿಗೆ ಸಂಸ್ಕಾರಯುತ ಮಕ್ಕಳ ಮನಸ್ಸು ಕಟ್ಟಲು ಮಠ ಸಿದ್ಧವಿದೆ ಎಂದು ನುಡಿದರು.
ಪ್ರಾಂಶುಪಾಲ ಯತೀಶ್ ಮಾತನಾಡಿ, ಭಾರತೀಯ ಜೀವನ ಪದ್ಧತಿಯಲ್ಲಿನ ತ್ಯಾಗ, ಸೇವೆಯಂತಹ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದು ಪ್ರಮುಖ ಎಂದರು. ಕೇವಲ ರ‌್ಯಾಂಕ್ ಪಡೆಯುವುದು, ಹಣ ಸಂಪಾದನೆ ಮತ್ತು ಪ್ರತಿಷ್ಠೆಗಳೇ ಪ್ರಧಾನವಾಗಬಾರದು. ಮಾನವೀಯ ಮೌಲ್ಯಗಳು ಬಹಳ ಮುಖ್ಯ. ಧರ್ಮವಿಲ್ಲದೇ ಮಾಡುವ ಹಣ ಸಂಪಾದನೆ ವ್ಯರ್ಥ ಎಂದರು. ಬೇರೋಬ್ಬರಿಗೆ ತೊಂದರೆ ನೀಡದಂತೆ ಬದುಕುವುದು ಭಾರತೀಯರ ಉದ್ದೇಶ. ನಮ್ಮ ಧರ್ಮವೂ ಅದನ್ನೇ ಹೇಳಿದೆ. ಶಿಬಿರದಲ್ಲಿ ಕಲಿತ ಸದ್ಗುಣಗಳು ಭವಿಷ್ಯದ ಬದುಕು ರೂಪಿಸಲು ನೆರವಾಗಲಿವೆ ಎಂದರು. ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುಜೇಂದ್ರಕುಮಾರ್, ಜಿಲ್ಲಾ ಮಾಜಿ ಅಧ್ಯಕ್ಷ ಸುಬ್ರಮಣ್ಯ, ಡಾ. ಶಿವರಾಮು,ಎಳನೀರು ಪುಟ್ಟಣ್ಣ, ವಕೀಲ ಲಕ್ಷ್ಮೀಪುರ ಚಂದ್ರು, ಶಿಕ್ಷಕರಾದ ಕಾಂತರಾಜು, ಕೆ.ಎಸ್. ಚಂದ್ರು, ಯೋಗ ಶಿಕ್ಷಕ ಪರಮೇಶ್, ಅವಿನಾಶ್, ಗಂಜಿಗೆರೆ ಮಹೇಶ್ ಮತ್ತಿತರರಿದ್ದರು.