ಕಟ್ಟೇರಿ ಗ್ರಾಮದ ಬಳಿಯ ವಸತಿ ಶಾಲೆಯಲ್ಲಿ 5 ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಂದಿನ ಕಟ್ಟೇರಿ ಸರ್ಕಾರಿ ಪೌಢಶಾಲೆ ಮುಖ್ಯಶಿಕ್ಷಕ ಹಾಗೂ ವಸತಿ ನಿಲಯದ ಉಸ್ತುವಾರಿ ವೈ.ಚಿನ್ಮಯಾನಂದ ಮೂರ್ತಿಗೆ 7 ವರ್ಷ ಕಠಿಣ ಶಿಕ್ಷೆ, 4 ಲಕ್ಷ ರೂ. ದಂಡ ವಿಧಿಸಿ ಮಂಡ್ಯ ವಿಶೇಷ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ಕೆ.ಆರ್. ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಸ್ಟೆಲ್‌ವೊಂದರ ವಿದ್ಯಾರ್ಥಿನಿಯರಿಗೆ 2022 ರ ಡಿ.14 ರಂದು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿ ವಿರುದ್ಧ ಪ್ರಕರಣದ ದಾಖಲಾಗಿತ್ತು.
ಪಿಎಸ್‌ಐ ಸಿ.ಎಂ.ನಿಂಗರಾಜು ಪ್ರಕರಣ ದಾಖಲಿಸಿ, ಚಿನ್ಮಯಾನಂದ ಮೂರ್ತಿಯನ್ನು ವಶಕ್ಕೆ ಪಡೆದಿದ್ದರು. ವೃತ್ತ ನಿರೀಕ್ಷಕ ಟಿ.ಎಂ.ಪುನೀತ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕಿ(ಪೋಕ್ಸೊ) ಎಂ.ಜೆ.ಪೂರ್ಣಿಮಾ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ವಿ ಶಿಕ್ಷೆ ವಿಧಿಸಿದ್ದಾರೆ.
ಚಿನ್ಮಯಾನಂದ ಮೂರ್ತಿ ಪ್ರಸ್ತುತ ಚಾಮರಾಜನಗರದ ಡಯಟ್‌ನಲ್ಲಿ ಪ್ರಾಧ್ಯಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ತೀರ್ಪು ಪ್ರಕಟವಾಗುತ್ತಿದ್ದಂತೆ ಅಪರಾಧಿಯನ್ನು ವಶಕ್ಕೆ ಪಡೆದ ಪೊಲೀಸರು ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಂಡರು.